FIFA  
ಫುಟ್ಬಾಲ್

24 ವರ್ಷಗಳ ಕಾಯುವಿಕೆ ಅಂತ್ಯ: FIFA ವಿಶ್ವಕಪ್ ನಾಕೌಟ್‌ನಲ್ಲಿ ಮೊದಲ ಗೋಲು ಬಾರಿಸಿದ ರೊನಾಲ್ಡೊ

ಪ್ರಮುಖ ಮುಖ್ಯಾಂಶಗಳು

  • 41ರ ಹರೆಯದಲ್ಲಿ ವಿಶ್ವಕಪ್ ಇತಿಹಾಸ ಬರೆದ ರೊನಾಲ್ಡೊ; ಪೋರ್ಚುಗಲ್‌ಗೆ ಗೆಲುವು
  • ಕ್ರೊಯೇಷಿಯಾ ವಿರುದ್ಧ ರೊನಾಲ್ಡೊ ದಾಖಲೆ ಗೋಲು: ಪೋರ್ಚುಗಲ್ ರೌಂಡ್ ಆಫ್ 16ಕ್ಕೆ
  • ಪೆನಾಲ್ಟಿ ಗೋಲಿನೊಂದಿಗೆ ಹೊಸ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
ನವದೆಹಲಿ: 2026ರ FIFA ವಿಶ್ವಕಪ್‌ನ ರೌಂಡ್ ಆಫ್ 32 ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧ ಪೆನಾಲ್ಟಿ ಗೋಲು ಬಾರಿಸಿದ ಪೋರ್ಚುಗಲ್‌ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಹೌದು, 41 ವರ್ಷ 147 ದಿನಗಳ ವಯಸ್ಸಿನಲ್ಲಿ ವಿಶ್ವಕಪ್ ನಾಕೌಟ್ ಹಂತದಲ್ಲಿ ಗೋಲು ಬಾರಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾಗಿದ್ದಾರೆ. ಇದೇ ವೇಳೆ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಅವರ ಮೊದಲ ಗೋಲು ಎಂಬ ದಾಖಲೆಯೂ ಸೇರ್ಪಡೆಯಾಗಿದೆ. ಪಂದ್ಯದಲ್ಲಿ ಪೋರ್ಚುಗಲ್ 2-1 ಗೋಲುಗಳಿಂದ ಗೆದ್ದು ರೌಂಡ್ ಆಫ್ 16 ಪ್ರವೇಶಿಸಿತು.
ರೊನಾಲ್ಡೊಗೂ ಮೊದಲು ಈ ದಾಖಲೆ ಪೋರ್ಚುಗಲ್‌ನ ಮಾಜಿ ಆಟಗಾರ ಪೆಪೆ ಹೆಸರಿನಲ್ಲಿತ್ತು. ಅವರು 2022ರ ವಿಶ್ವಕಪ್‌ನಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 39 ವರ್ಷ 283 ದಿನಗಳ ವಯಸ್ಸಿನಲ್ಲಿ ಗೋಲು ಬಾರಿಸಿದ್ದರು.

ಪೆನಾಲ್ಟಿ ಮೂಲಕ ಸಮಬಲದ ಗೋಲು

ದ್ವಿತೀಯಾರ್ಧದಲ್ಲಿ ಕಾರ್ನರ್ ಸಂದರ್ಭ ಪೋರ್ಚುಗಲ್ ಆಟಗಾರ ರೆನಾಟೊ ವೇಗಾ ಅವರನ್ನು ಬಾಕ್ಸ್ ಒಳಗೆ ಕೆಡವಿದ ಹಿನ್ನೆಲೆಯಲ್ಲಿ ತಂಡಕ್ಕೆ ಪೆನಾಲ್ಟಿ ಲಭಿಸಿತು. ಪೆನಾಲ್ಟಿ ಅವಕಾಶವನ್ನು ರೊನಾಲ್ಡೊ ಯಾವುದೇ ತಪ್ಪಿಲ್ಲದೆ ಗೋಲಾಗಿ ಪರಿವರ್ತಿಸಿ ತಂಡಕ್ಕೆ ಸಮಬಲ ತಂದುಕೊಟ್ಟರು.
ಇದಕ್ಕೂ ಮೊದಲು ರೊನಾಲ್ಡೊ ಚೆಂಡನ್ನು ಗೋಲುಪೋಸ್ಟ್‌ಗೆ ಸೇರಿಸಿದ್ದರೂ, ವಿಡಿಯೊ ಪರಿಶೀಲನೆಯಲ್ಲಿ (VAR) ಅವರ ಭುಜ ಆಫ್‌ಸೈಡ್‌ನಲ್ಲಿದ್ದ ಕಾರಣ ಗೋಲನ್ನು ಅಮಾನ್ಯಗೊಳಿಸಲಾಯಿತು.

ಗೊನ್ಸಾಲೊ ರಾಮೋಸ್ ಗೆಲುವಿನ ಗೋಲು

ರೊನಾಲ್ಡೊ ಸಮಬಲ ಸಾಧಿಸಿದ ಬಳಿಕ ಗೊನ್ಸಾಲೊ ರಾಮೋಸ್ ಪೋರ್ಚುಗಲ್ ಪರ ಎರಡನೇ ಗೋಲು ದಾಖಲಿಸಿ ತಂಡಕ್ಕೆ 2-1 ಅಂತರದ ಗೆಲುವು ತಂದುಕೊಟ್ಟರು. ಈ ಜಯದೊಂದಿಗೆ ಪೋರ್ಚುಗಲ್ ತಂಡ ಟೂರ್ನಿಯ ರೌಂಡ್ ಆಫ್ 16 ಹಂತಕ್ಕೆ ಪ್ರವೇಶಿಸಿತು.

ಕೊನೆಯಲ್ಲಿ ಮತ್ತೊಮ್ಮೆ ವಿಎಆರ್ ಹಸ್ತಕ್ಷೇಪ

ಪಂದ್ಯದ ಅಂತಿಮ ಕ್ಷಣಗಳಲ್ಲಿ ಕ್ರೊಯೇಷಿಯಾದ ಜೋಸ್ಕೊ ಗ್ವಾರ್ಡಿಯೊಲ್ ಗೋಲು ಬಾರಿಸಿದರೂ, ವಿಡಿಯೊ ಸಹಾಯಕ ತೀರ್ಪುಗಾರ (VAR) ಪರಿಶೀಲನೆಯ ಬಳಿಕ ಅದನ್ನು ಅಮಾನ್ಯಗೊಳಿಸಲಾಯಿತು.
ಇಗೊರ್ ಮಾತಾನೊವಿಚ್ ಚೆಂಡನ್ನು ಮುಂದಕ್ಕೆ ತಳ್ಳಿದ ವೇಳೆ ಮಾರಿಯೊ ಪಸಾಲಿಚ್ ಆಫ್‌ಸೈಡ್ ಸ್ಥಾನದಲ್ಲಿದ್ದರು ಎಂದು ತೀರ್ಪುಗಾರರು ನಿರ್ಧರಿಸಿದ್ದರಿಂದ ಗೋಲಿಗೆ ಮಾನ್ಯತೆ ದೊರೆಯಲಿಲ್ಲ. ಇದರೊಂದಿಗೆ ಪೋರ್ಚುಗಲ್ 2-1 ಅಂತರದ ಗೆಲುವು ಕಾಯ್ದುಕೊಂಡಿತು,(ಏಜೆನ್ಸೀಸ್​).