FIFA WorldCup 2026: ಭಾರತೀಯ ಸಂಜಾತ ನಿಶಾನ್ ಪದಾರ್ಪಣೆ
ವ್ಯಾಂಕೋವರ್ (ಕೆನಡಾ): ಈ ಬಾರಿ ಫಿಫಾ ವಿಶ್ವಕಪ್ನಲ್ಲಿ (FIFA World Cup) ಆಡುತ್ತಿರುವ ವಿವಿಧ ತಂಡಗಳ ಭಾಗವಾಗಿರುವ ನಾಲ್ವರು ಭಾರತೀಯ ಸಂಜಾತರಲ್ಲಿ ನಿಶಾನ್ ವೆಲುಪಿಳ್ಳೆ ಆಸ್ಟ್ರೆಲಿಯಾ ಪರ ಟರ್ಕಿ ವಿರುದ್ಧದ ಪಂದ್ಯದ 61ನೇ ನಿಮಿಷದಲ್ಲಿ ಕಣಕ್ಕಿಳಿದರು. ಈ ಮೂಲಕ 25 ವರ್ಷದ ನಿಶಾನ್ ಫಿಫಾ ವಿಶ್ವಕಪ್ಗೆ ಪದಾರ್ಪಣೆ ಮಾಡಿದರು. ನಿಶಾನ್ ಅವರ ತಾಯಿ ಆಂಗ್ಲೋ-ಇಂಡಿಯನ್ ಆಗಿದ್ದಾರೆ. ಯುವ ಆಟಗಾರರಾಗಿ ಮೆಲ್ಬೋರ್ನ್ ವಿಕ್ಟರಿ ಕ್ಲಬ್ ಪರ ಮಿಂಚಿದ್ದ ಅವರು, 2024ರಲ್ಲಿ ಆಸೀಸ್ ತಂಡದ ಪರ ಪದಾರ್ಪಣೆ ಮಾಡಿದ್ದರು. ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಅವರು 3 ಗೋಲು ಸಿಡಿಸಿದ್ದರು.
ನ್ಯೂಜಿಲೆಂಡ್ ತಂಡದಲ್ಲಿರುವ ಸರ್ಪ್ರೀತ್ ಸಿಂಗ್, ಕತಾರ್ ತಂಡದಲ್ಲಿರುವ ತಹ್ಸಿನ್ ಮೊಹಮ್ಮದ್ ಜಮ್ಶಿಡ್ ಮತ್ತು ಕಾಂಗೋ ಡಿಆರ್ ತಂಡದಲ್ಲಿರುವ ಸ್ಯಾಮ್ಯುಯೆಲ್ ಮೌಟೌಸ್ಸಾಮಿ ಹಾಲಿ ಫಿಾ ವಿಶ್ವಕಪ್ನಲ್ಲಿ ಭಾಗವಹಿಸುತ್ತಿರುವ ಇತರ ಭಾರತೀಯ ಸಂಜಾತರಾಗಿದ್ದಾರೆ.
27 ವರ್ಷದ ಸರ್ಪ್ರೀತ್ ಪಂಜಾಬ್ನ ಜಲಂಧರ್ ಮೂಲದವರಾಗಿದ್ದು, ಆಲ್ ವೈಟ್ಸ್ ತಂಡದ ಪರ ಈಗಾಗಲೆ 24 ಪಂದ್ಯ ಆಡಿದ್ದಾರೆ. 19 ವರ್ಷದ ತಹ್ಸಿನ್ ಕೇರಳ ಮೂಲದ ದಂಪತಿಯ ಪುತ್ರರಾಗಿದ್ದು, ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಭಾರತದ ವಿರುದ್ಧವೂ ಕತಾರ್ ಪರ ಆಡಿದ್ದರು. 29 ವರ್ಷದ ಸ್ಯಾಮ್ಯುಯೆಲ್ ತಂದೆ ತಮಿಳುನಾಡು ಮೂಲದವರು. ಸ್ಯಾಮ್ಯುಯೆಲ್ ಮಿಡ್ಫೀಲ್ಡರ್ ಆಗಿ ಇದುವರೆಗೆ 57 ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ ಆಡಿದ್ದಾರೆ.