ಫಿಫಾ ವಿಶ್ವಕಪ್ ಕಣದಲ್ಲಿ 1,248 ಆಟಗಾರರು; ಮೆಸ್ಸಿ, ರೊನಾಲ್ಡೊಗೆ ದಾಖಲೆಯ 6ನೇ ಆವೃತ್ತಿ!
ಬೆಂಗಳೂರು: ಈ ಬಾರಿ 48 ತಂಡಗಳಿಂದ ಒಟ್ಟು 1,248 ಆಟಗಾರರು (ಪ್ರತಿ ತಂಡದಿಂದ 26) ಫಿಫಾ ವಿಶ್ವಕಪ್ನಲ್ಲಿ (FIFA World Cup) ಭಾಗವಹಿಸಲಿದ್ದಾರೆ. ಈ ಪೈಕಿ 357 ಆಟಗಾರರು 2022ರ ಆವೃತ್ತಿಯಲ್ಲೂ ಆಡಿದ್ದರೆ, 891 ಆಟಗಾರರು ಪದಾರ್ಪಣೆ ಮಾಡಲಿದ್ದಾರೆ. 20 ವರ್ಷದೊಳಗಿನ 22 ಆಟಗಾರರು ಮತ್ತು 40 ವರ್ಷ ಮೇಲ್ಪಟ್ಟ 7 ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
ಈ ಹಿಂದೆ ವಿಶ್ವಕಪ್ ಗೆದ್ದ ತಂಡಗಳ ಭಾಗವಾಗಿದ್ದ 22 ಆಟಗಾರರು ಈ ಬಾರಿ ಕಣದಲ್ಲಿದ್ದಾರೆ. 2014ರ ಚಾಂಪಿಯನ್ ಜರ್ಮನಿಯ ಮ್ಯಾನ್ಯುಯೆಲ್ ನ್ಯುಯೆರ್, 2018ರ ಚಾಂಪಿಯನ್ ಫ್ರಾನ್ಸ್ನ ಔಸ್ಮನ್ ಡೆಂಬೆಲ್, ಲುಕಾಸ್ ಹೆರ್ನಾಂಡೆಜ್, ಎನ್ಗೋಲೊ ಕಾಂಟೆ, ಕೈಲಿಯನ್ ಎಂಬಾಪೆ ಜತೆಗೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ, ಲಿಯೋನೆಲ್ ಮೆಸ್ಸಿ ಸಹಿತ ಕಳೆದ ಆವೃತ್ತಿಯ ವಿಜೇತ ತಂಡದ 17 ಆಟಗಾರರನ್ನು ಉಳಿಸಿಕೊಂಡಿದೆ.
ಮ್ಯಾಂಚೆಸ್ಟರ್ ಸಿಟಿಯ 19 ಸ್ಟಾರ್ಸ್
ಫುಟ್ಬಾಲ್ ಕ್ಲಬ್ಗಳ ಪೈಕಿ ಮ್ಯಾಂಚೆಸ್ಟರ್ ಸಿಟಿ ತಂಡದಿಂದ ಗರಿಷ್ಠ 19 ಆಟಗಾರರು ಈ ಬಾರಿ ವಿಶ್ವಕಪ್ನಲ್ಲಿ ಆಡಲಿದ್ದಾರೆ. ಬೇಯರ್ನ್ ಮ್ಯೂನಿಚ್ನಿಂದ 18, ಆರ್ಸೆನಲ್, ಪ್ಯಾರಿಸ್ ಸೇಂಟ್-ಜಮೈರ್ನ್ನಿಂದ ತಲಾ 16, ಬಾರ್ಸಿಲೋನಾದಿಂದ 15, ಮ್ಯಾಂಚೆಸ್ಟರ್ ಯುನೈಟೆಡ್ನಿಂದ 12, ಲಿವರ್ಪೂಲ್ನಿಂದ 11 ಆಟಗಾರರು ಕಣದಲ್ಲಿದ್ದಾರೆ.
ಮೆಕ್ಸಿಕೋದ 17 ವರ್ಷದ ಗಿಲ್ಬರ್ಟೊ ಮೋರ ಟೂರ್ನಿಯಲ್ಲಿ ಆಡಲಿರುವ ಅತಿ ಕಿರಿಯ ಆಟಗಾರ. ಅವರ ಸಹ&ಆಟಗಾರರಾಗಿರುವ ಗಿರ್ಲೆರ್ಮೊ ಒಚೋವೊ, ಮೋರಾ ಹುಟ್ಟುವುದಕ್ಕೆ ಮುನ್ನವೇ ವಿಶ್ವಕಪ್ ಆಡಿದ ಅನುಭವ ಹೊಂದಿದ್ದಾರೆ. ಮೋರಾ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ದಣ ಆಫ್ರಿಕಾ ವಿರುದ್ಧ ಕಣಕ್ಕಿಳಿದರೆ, ವಿಶ್ವಕಪ್ನಲ್ಲಿ ಆಡಿದ ಒಟ್ಟಾರೆ 6ನೇ ಅತಿಕಿರಿಯ ಆಟಗಾರ ಎನಿಸಲಿದ್ದಾರೆ. ಉಳಿದಂತೆ 18 ವರ್ಷದ 4 ಆಟಗಾರರೂ ಟೂರ್ನಿಯಲ್ಲಿ ಆಡಲಿದ್ದಾರೆ.
ಸ್ಕಾಟ್ಲೆಂಡ್ನ 43 ವರ್ಷದ ಗೋಲು ಕೀಪರ್ ಕ್ರೇಗ್ ಗೋರ್ಡನ್ ಈ ಬಾರಿ ಟೂರ್ನಿಯಲ್ಲಿ ಆಡಲಿರುವ ಅತ್ಯಂತ ಹಿರಿಯ ಆಟಗಾರ. ಅವರು ಒಟ್ಟಾರೆ ಫಿಫಾ ವಿಶ್ವಕಪ್ನಲ್ಲಿ ಆಡಲಿರುವ 2ನೇ ಅತಿ ಹಿರಿಯರೆನಿಸಿದ್ದಾರೆ. ಕ್ರಿಶ್ಚಿಯಾನೊ ರೊನಾಲ್ಡೊ (41 ವರ್ಷ, 126 ದಿನ) ಕೂಡ ಟೂರ್ನಿಯ ವೇಳೆ ಕಣಕ್ಕಿಳಿದಾಗ ವಿಶ್ವಕಪ್ ಇತಿಹಾಸದ 4ನೇ ಅತಿ ಹಿರಿಯ ಆಟಗಾರ ಎನಿಸಲಿದ್ದಾರೆ.
ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ, ಪೋರ್ಚುಗಲ್ನ ಕ್ರಿಶ್ಚಿಯಾನೊ ರೊನಾಲ್ಡೊ ಮತ್ತು ಮೆಕ್ಸಿಕೋದ ಗಿಲ್ಲೆರ್ಮೊ ಒಚೋವಾಗೆ ಇದು 6ನೇ ಫಿಾ ವಿಶ್ವಕಪ್. ಈ ಪೈಕಿ ಮೆಸ್ಸಿ-ರೊನಾಲ್ಡೊ 6 ವಿಶ್ವಕಪ್ ಆಡಿದ ಮೊದಲಿಗರೆನಿಸಲಿದ್ದಾರೆ. ಈ ಮುನ್ನ ಗರಿಷ್ಠ 5 ವಿಶ್ವಕಪ್ ಆಡಿದ 5 ಆಟಗಾರರೊಂದಿಗೆ ಅವರು ಸಮಬಲದಲ್ಲಿದ್ದರು. ಒಚೋವಾ 2006, 2010ರ ವಿಶ್ವಕಪ್ ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆದಿರಲಿಲ್ಲ ಎಂಬುದು ಗಮನಾರ್ಹ.
ಆಸ್ಟ್ರಿಯಾದ 6.7 ಅಡಿ ಎತ್ತರದ ಗೋಲುಕೀಪರ್ ಫ್ಲೋರಿಯನ್ ವೀಗೆಲ್ ಈ ಬಾರಿ ವಿಶ್ವಕಪ್ ಆಡಲಿರುವ ಅತಿ ಎತ್ತರದ ಆಟಗಾರ. 5.2 ಅಡಿ ಎತ್ತರದ ಪನಾಮದ ಸೀಸರ್ ಯಾನಿಸ್ ವಿಶ್ವಕಪ್ನ ಅತಿ ಗಿಡ್ಡಗಿನ ಆಟಗಾರ.