ಟಿಗ್ರೆ (ಅರ್ಜೆಂಟೀನಾ): ಅರ್ಜೆಂಟೀನಾ ಫುಟ್‌ಬಾಲ್ ದಂತಕಥೆ ಡೀಗೋ ಮರಡೋನಾ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅರ್ಜೆಂಟೀನಾ ತಂಡದ ನಾಯಕರಾಗಿ 1986ರ ಫಿಫಾ ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಮರಡೋನಾ ಇತ್ತೀಚೆಗಷ್ಟೇ ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕರೊನಾ ಪಾಸಿಟಿವ್‌ನಿಂದಲೂ ಚೇತರಿಸಿಕೊಂಡು ಕಳೆದ ಅಕ್ಟೋಬರ್ 30ರಂದು 60ನೇ ಹುಟ್ಟು ಆಚರಿಸಿಕೊಂಡಿದ್ದ ಮರಡೋನಾ, ಅದಾದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಹ್ಯಾಂಡ್ ಆಫ್ ಗಾಡ್ ಮತ್ತು ಶತಮಾನದ ಗೋಲು
1986ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯ. ಅರ್ಜೆಂಟೀನಾ- ಇಂಗ್ಲೆಂಡ್ ಸಮಬಲದ ಮುಖಾಮುಖಿಯಲ್ಲಿ ಅದ್ಭುತಗಳೇ ಘಟಿಸಿದವು. ’ದೇವರ ಕೈ ಗೋಲು’ ಎಂದು ಕುಖ್ಯಾತವಾಗ ಹ್ಯಾಂಡ್‌ಗೋಲ್ ಮೂಲಕ ಅರ್ಜೆಂಟೀನಾಗೆ ಮುನ್ನಡೆ ಕೊಡಿಸಿದ್ದ ಮರಡೋನಾ, ಅದಾದ ಕೆಲವೇ ನಿಮಿಷಗಳಲ್ಲಿ ಶತಮಾನದ ಶ್ರೇಷ್ಠ ಗೋಲು ದಾಖಲಿಸಿ ಅರ್ಜೆಂಟೀನಾಗೆಲುವು ಖಾತರಿ ಪಡಿಸಿದರು. ಇಂಗ್ಲೆಂಡ್‌ನ ಚಕ್ರವ್ಯೆಹವನ್ನು ಬೇಧಿಸಿ ಏಕಾಂಗಿಯಾಗಿ ಚೆಂಡನ್ನು ಡ್ರಿಬಲ್ ಮಾಡುತ್ತ 55 ಮೀ. ಕ್ರಮಿಸಿದ ಮರಡೋನಾ 10 ಸೆಕೆಂಡ್‌ಗಳ ಮಾಂತ್ರಿಕ ಅವಧಿಯಲ್ಲಿ ಅತ್ಯದ್ಭುತ ಗೋಲು ಗಳಿಸಿದ್ದರು. ಫುಟ್‌ಬಾಲ್ ದೇವರ ಶ್ರೇಷ್ಠ ಹಾಗೂ ನಿಕೃಷ್ಟ ಕ್ಷಣಗಳೆರಡಕ್ಕೂ ಆ ಪಂದ್ಯ ಸಾಕ್ಷಿಯಾಗಿತ್ತು.
1986ರ ವಿಶ್ವಕಪ್ ಮರಡೋನಾ ಪಾಲಿನ ಶ್ರೇಷ್ಠ ವಿಶ್ವಕಪ್ ಆಗಿತ್ತು. ಸೆಮಿಫೈನಲ್‌ನಲ್ಲಿ ಬಲಾಢ್ಯ ಬೆಲ್ಜಿಯಂ ವಿರುದ್ಧ ಜೋಡಿ ಗೋಲು ಬಾರಿಸಿದ್ದ ಮರಡೋನಾ, ಫೈನಲ್‌ನಲ್ಲೂ ಪಶ್ಚಿಮ ಜರ್ಮನಿ ವಿರುದ್ಧ ಇತಿಹಾಸ ಬರೆದರು. 83ನೇ ನಿಮಿಷದಲ್ಲಿ ಪಂದ್ಯ 2-2 ಸಮಗೊಂಡಿದ್ದ ಸಂದರ್ಭದಲ್ಲಿ ಮರಡೋನಾ ಚಾಕಚಕ್ಯತೆಯಿಂದ ಗೋಲಿನ ಅವಕಾಶ ಸೃಷ್ಟಿಸಿ ಅರ್ಜೆಂಟೀನಾ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾದರು.
ಬಾಲ್ಯದ ಬೆಳಕು
ಡೀಗೋ ಮರಡೋನ ಜನಿಸಿದ್ದು 1960 ಅಕ್ಟೋಬರ್ 30ರಂದು. 8ನೇ ವರ್ಷದಲ್ಲೇ ಡೀಗೋ ಪ್ರತಿಭೆ ಗುರುತಿಸಿದ ಎಸ್ಟ್ರೆಲ್ಲ ರೋಜಾ ಕ್ಲಬ್ ವಿಶೇಷ ತರಬೇತಿ ನೀಡಿತು. 1976ರಿಂದ 81ವರೆಗೆ 5 ವರ್ಷ ಅರ್ಜೆಂಟೀನೋಸ್ ಜ್ಯೂನಿಯರ್ಸ್ ಪರ ಆಡಿದ ಡೀಗೋ 167 ಪಂದ್ಯಗಳಿಂದ 115 ಗೋಲು ಬಾರಿಸಿದ್ದರು. ಬಳಿಕ ಆ ಕಾಲದಲ್ಲೇ 4 ದಶಲಕ್ಷ ಡಾಲರ್‌ಗೆ ಬೋಕಾ ಜೂನಿಯರ್ಸ್‌ಗೆ ವರ್ಗಾವಣೆಗೊಂಡರು.