Adam Gilchrist: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 3-1 ಅಂತರದಲ್ಲಿ ಸೋಲುಂಡ ಭಾರತ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಿಂದ ಹೊರಗುಳಿಯಿತು. ರೋಹಿತ್ ಶರ್ಮ ನಾಯಕತ್ವದಲ್ಲಿ ಪಂದ್ಯಗಳನ್ನಾಡಿದ ಟೀಮ್ ಇಂಡಿಯಾ, ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಒಂದೆಡೆ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಸರಣಿಯುದ್ದಕ್ಕೂ ಅತ್ಯಂತ ಕಳಪೆ ಫಾರ್ಮ್ ಹೊಂದಿದರೆ, ಉಳಿದ ಆಟಗಾರರೂ ಕೂಡ ಅಲ್ಲಲ್ಲಿ ಕಳಪೆ ಪ್ರದರ್ಶನ ತೋರಿದ್ದು ಸದ್ಯ ಮಾಜಿ ಹಿರಿಯ ಕ್ರಿಕೆಟಿಗರ ಟೀಕೆ, ವ್ಯಂಗ್ಯಗಳಿಗೆ ಕಾರಣವಾಗಿದೆ.
ಟೀಮ್ ಇಂಡಿಯಾ ಮಾಜಿ ಆಟಗಾರರು ಸೇರಿದಂತೆ ಆಸೀಸ್ನ ಹಿರಿಯ ಮಾಜಿ ಕ್ರಿಕೆಟಿಗರು ಕೂಡ ಭಾರತ ತಂಡದ ಸ್ಟಾರ್ ಆಟಗಾರರ ಕಳಪೆ ಪ್ರದರ್ಶನವನ್ನು ಟೀಕಿಸಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಸರಣಿ ಮುಗಿದ ದಿನದಿಂದಲೂ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಕಳಪೆ ಆಟಕ್ಕೆ ಅನೇಕರು ಜಾಲತಾಣಗಳಲ್ಲಿ ವ್ಯಂಗ್ಯವಾಡಿದ್ದಾರೆ. ಆದರೆ, ಆಸ್ಟ್ರೇಲಿಯಾದ ದಿಗ್ಗಜ, ಮಾಜಿ ಬ್ಯಾಟರ್-ವಿಕೆಟ್ ಕೀಪರ್ ಆ್ಯಡಮ್ ಗಿಲ್ಕ್ರಿಸ್ಟ್ ಮಾತ್ರ, ಗವಾಸ್ಕರ್ ಟ್ರೋಫಿ ಭಾಗವಾಗಿದ್ದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್, ಏಕೆ ಸರಣಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಲಿಲ್ಲ. ಅದಕ್ಕೆ ಕಾರಣವೇನು? ಎಂಬುದನ್ನು ಇಲ್ಲಿ ಮಾತನಾಡಿದ್ದಾರೆ.
ತಂಡದಲ್ಲಿ ಅವಕಾಶ ಸಿಗುವುದೇ ಅತ್ಯಂತ ಕಷ್ಟಕರ. ಹೀಗಿರುವಾಗ ಸ್ಥಾನ ಪಡೆದ ಬಳಿಕ ಉತ್ತಮವನ್ನು ಮೀರಿ ಅತ್ಯುತ್ತಮ ಪ್ರದರ್ಶನ ನೀಡುವುದು ಆಯ್ಕೆಯಾದ ಆಟಗಾರರ ಕರ್ತವ್ಯ ಮತ್ತು ಧ್ಯೇಯ. ಇದನ್ನೇ ತಮ್ಮ ಶೈಲಿಯಲ್ಲಿ ಶುಭಮನ್ ಕಿವಿಗೆ ತಲುಪಿಸಿರುವ ಆ್ಯಡಮ್, "ತನ್ನ ಬ್ಯಾಟ್ನಿಂದ ತಂಡಕ್ಕೆ ಹೆಚ್ಚುವರಿ ರನ್ಗಳನ್ನು ತಂದುಕೊಡುವುದರ ಬಗ್ಗೆ ಯೋಚಿಸಬೇಕೇ ಹೊರತು ಹೇರ್ಸ್ಟೈಲ್ ಬಗ್ಗೆ ಅಲ್ಲ. ಆಸೀಸ್ ವಿರುದ್ಧದ ಸರಣಿಯಲ್ಲಿ ಗಿಲ್ ಮಾಡಿದ ತಪ್ಪು ಇದೇ. ತನ್ನ ಹೇರ್ಸ್ಟೈಲ್ಗೆ ಕೊಟ್ಟ ಗಮನ, ರನ್ ಗಳಿಸುವಲ್ಲಿ ಗಿಲ್ ತೋರಲಿಲ್ಲ. ಪ್ರಾಯಶಃ ತೋರಿದ್ದರೆ ಖಂಡಿತ ಉತ್ತಮ ಪ್ರದರ್ಶನ ಅವರಿಂದ ಬರುತ್ತಿತ್ತು" ಎಂದು ಹೇಳಿದ್ದಾರೆ.
"ತಂಡದ ಪರ ಮೈದಾನಕ್ಕಿಳಿದ ಮೇಲೆ ದೊಡ್ಡ ಸಂಖ್ಯೆಯ ರನ್ ಗಳಿಸುವತ್ತ ಶುಭಮನ್ ಗಮನ ಇರಬೇಕು. ಶತಕ ಬಾರಿಸಿದ ನಂತರ ಹೆಲ್ಮೆಟ್ ತೆಗೆದು ಸಂಭ್ರಮಿಸುತ್ತೀರಿ ನೋಡಿ, ಆಗ ನಿಮ್ಮ ಕೂದಲು ಇನ್ನೂ ಆಕರ್ಷಕವಾಗಿ ಕಾಣುತ್ತದೆ. ಹೇರ್ಸ್ಟೈಲ್ನತ್ತ ಬಿಟ್ಟು ಅತ್ಯಧಿಕ ರನ್ ಗಳಿಸುವತ್ತ ಹೆಚ್ಚು ಗಮನಕೊಡಿ" ಎಂದು ಗಿಲ್ಕ್ರಿಸ್ಟ್ ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).