ಬೆಂಗಳೂರು: ಹಾಲಿ ಐಪಿಎಲ್ ಆವೃತ್ತಿಯಲ್ಲಿ ಸತತ ಸೋಲುಗಳ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ 18ರಂದು ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದ್ದು, ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿವೆ.
ಸತತ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿರುವ ಆರ್ಸಿಬಿ ತಂಡವು ಸಿಎಸ್ಕೆಯನ್ನು ಮಣಿಸಿ ಪ್ಲೇಆಫ್ಗೇರುವ ವಿಶ್ವಾಸದಲ್ಲಿದ್ದು, ಪಂದ್ಯಕ್ಕೂ ಮುನ್ನ ಉಭಯ ತಂಡಗಳಿಗೆ ಶಾಕ್ ಒಂದು ಎದುರಾಗಿದ್ದು, ಈ ಪಂದ್ಯಕ್ಕೆ ಉಭಯ ತಂಡಗಳ ಒಟ್ಟು 5 ಆಟಗಾರರು ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಅಲಭ್ಯರಾಗಲಿರುವ ಐವರು ಆಟಗಾರರ ಪೈಕಿ ಮೂವರು ಚೆನ್ನೈ ಸೂಪರ್ಕಿಂಗ್ಸ್ ಹಾಗೂ ಇಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯರ್ಸ್ ಎಂದು ತಿಳಿದು ಬಂದಿದೆ. ಆ ಆಟಗಾರರು ಯಾರೆಂದರೆ... ಮೊಯಿನ್ ಅಲಿ (ಇಂಗ್ಲೆಂಡ್), ವಿಲ್ ಜಾಕ್ಸ್ (ಇಂಗ್ಲೆಂಡ್), ರೀಸ್ ಟಾಪ್ಲಿ (ಇಂಗ್ಲೆಂಡ್), ಮಥೀಶ ಪತಿರಾಣ (ಶ್ರೀಲಂಕಾ), ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ) ಈ ಆಟಗಾರರು ಆರ್ಸಿಬಿ-ಸಿಎಸ್ಕೆ ನಡುವಿನ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ ತಂಡದ ಆಟಗಾರರಾದ ಮೊಯಿನ್ ಅಲಿ, ವಿಲ್ ಜಾಕ್ಸ್, ರೀಸ್ ಟಾಪ್ಲಿ ಟಿ-20 ವಿಶ್ವಕಪ್ಗೆ ಆಯ್ಕೆಯಾಗಿದ್ದು, ಇದಕ್ಕೂ ಮುನ್ನ ಮೇ 21 ರಿಂದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಟಿ-20 ಸರಣಿ ಆಡಿಸಲಾಗುತ್ತದೆ. ಅದಕ್ಕೂ ಮುನ್ನ ತಂಡವನ್ನು ಕೂಡಿಕೊಳ್ಳುವಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಹೀಗಾಗಿ ಈ ಮೂವರು ಆಟಗಾರರು ಐಪಿಎಲ್ನಲ್ಲಿ ತಾವು ಆಡುತ್ತಿರುವ ತಂಡವನ್ನು ತೊರೆದು ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಹಾಲಿ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದ ಬಾಂಗ್ಲಾದೇಶ ಮೂಲದ ವೇಗಿ ಮುಸ್ತಾಫಿಜುರ್ ರೆಹಮಾನ್ ಈಗಾಗಲೇ ಸಿಎಸ್ಕೆ ಕ್ಯಾಂಪ್ಅನ್ನು ತೊರೆದಿದ್ದು, ಬಾಂಗ್ಲಾದೇಶ್ ತಂಡವು ಮೇ 21 ರಿಂದ ಯುಎಸ್ಎ ವಿರುದ್ಧ ಟಿ20 ಸರಣಿ ಆಡಲಿದ್ದು, ಹೀಗಾಗಿ ಮುಸ್ತಫಿಜುರ್ ಕೂಡ ಸಿಎಸ್ಕೆ ತಂಡದ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಶ್ರೀಲಂಕಾ ತಂಡವು ಟಿ20 ವಿಶ್ವಕಪ್ಗಾಗಿ ಯುಎಸ್ಎನತ್ತ ಪ್ರಯಾಣ ಬೆಳೆಸಿದೆ. ಈ ತಂಡದಲ್ಲಿ ಮಥೀಶ ಪತಿರಾಣ ಕೂಡ ಇದ್ದು, ಹೀಗಾಗಿ ಸಿಎಸ್ಕೆ ತಂಡದ ಮುಂದಿನ ಪಂದ್ಯಗಳಿಗೆ ಪತಿರಾಣ ಕೂಡ ಸಿಎಸ್ಕೆಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯಕ್ಕೆ ಈ ಐವರು ಆಟಗಾರರು ಅಲಭ್ಯರಾಗಿದ್ದು, ಇವರು ಬದಲಿಯಾಗಿ ಫ್ರಾಂಚೈಸಿ ಯಾರನ್ನು ಆಯ್ಕೆ ಮಾಡುತ್ತದೆ ಎಂದು ಮೇ 18ರವರೆಗೂ ಕಾದು ನೋಡಬೇಕಿದೆ.