ಕ್ರೀಡೆ

7 ದಿನಗಳಲ್ಲಿ 2 ಟಿ20 ಲೀಗ್‌ ಪ್ರಶಸ್ತಿ ಗೆಲುವು ಕಂಡ ಅದೃಷ್ಟಶಾಲಿ ಈ ವೆಸ್ಟ್ ಇಂಡೀಸ್ ಕ್ರಿಕೆಟಿಗ!

ನವದೆಹಲಿ: ಟಿ20 ಲೀಗ್‌ಗಳಲ್ಲಿ ಪ್ರಶಸ್ತಿ ಗೆಲುವಿನ ಸಂಭ್ರಮ ಸುಲಭವಾಗಿ ಸಿಗುವಂಥದ್ದಲ್ಲ. ಹಾಗಿದ್ದರೂ, ವೆಸ್ಟ್ ಇಂಡೀಸ್‌ನ ಈ ಕ್ರಿಕೆಟಿಗ ಕೇವಲ 7 ದಿನಗಳ ಅಂತರದಲ್ಲಿ 2 ಟಿ20 ಲೀಗ್‌ಗಳಲ್ಲಿ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡಿದ್ದಾರೆ. ಈ ಅದೃಷ್ಟವಂತ ಆಟಗಾರರೇ ಶೆರ್ಫನ್​​ ರುದರ್​ಫೋರ್ಡ್.

ನವೆಂಬರ್ 10ರಂದು ದುಬೈನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ ಪ್ರಶಸ್ತಿ ಗೆಲುವಿನ ಸಂಭ್ರಮ ಆಚರಿಸಿದ ಶೆರ್ಫನ್​ ರುದರ್​ಫೋ‌ರ್ಡ್, ನವೆಂಬರ್ 17ರಂದು ಕರಾಚಿಯಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ತಂಡದ ಪ್ರಶಸ್ತಿ ಗೆಲುವಿನಲ್ಲೂ ಸಂಭ್ರಮಿಸಿದರು.

ಐಪಿಎಲ್ ಟೂರ್ನಿಯುದ್ದಕ್ಕೂ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ, ಒಂದೂ ಪಂದ್ಯ ಆಡುವ ಅವಕಾಶ ಪಡೆಯದಿದ್ದ 22 ವರ್ಷದ ಎಡಗೈ ಬ್ಯಾಟ್ಸ್‌ಮನ್ ಶೆರ್ಫನ್​ ರುದರ್​ಫೋರ್ಡ್, ಲಾಹೋರ್ ಖಲಂದರ್ಸ್‌ ವಿರುದ್ಧದ ಪಿಎಸ್‌ಎಲ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಪರ ಕಣಕ್ಕಿಳಿದರೂ, ಒಂದೇ ಎಸೆತ ಎದುರಿಸಿ ಶೂನ್ಯಕ್ಕೆ ಔಟಾಗಿದ್ದರು. ಆದರೂ ವಾರದ ಅಂತರದಲ್ಲಿ 2ನೇ ಪ್ರಶಸ್ತಿ ಗೆಲುವಿನ ಸಂಭ್ರಮದಲ್ಲಿ ಅವರು ಭಾಗಿಯಾದರು.

ಐಪಿಎಲ್ ಟೂರ್ನಿ ಮುಗಿಸಿ ಪಿಎಸ್‌ಎಲ್ ಟೂರ್ನಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ವೇಳೆ ರುದರ್​ಫೋರ್ಡ್ ಮುಂಬೈ ಇಂಡಿಯನ್ಸ್ ತಂಡದ ಜಾಕೆಟ್ ತೊಟ್ಟಿದ್ದ ಕಾರಣ ಕರಾಚಿ ಕಿಂಗ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳನ್ನು ಎದುರಿಸಿತ್ತು. ಬಳಿಕ ಫೈನಲ್ ಪಂದ್ಯದ ವೇಳೆ ಅವರು ಮುಂಬೈ ಇಂಡಿಯನ್ಸ್ ತಂಡದ ಗ್ಲೌಸ್ ಧರಿಸಿ ಆಡಿದ ಕಾರಣದಿಂದಲೂ ಮತ್ತೆ ಟ್ರೋಲ್‌ಗಳನ್ನು ಎದುರಿಸಿದ್ದರು.