ಕ್ರೀಡೆ

ಅಂತಾರಾಷ್ಟ್ರೀಯ ಟಿ20 ಇತಿಹಾಸದಲ್ಲಿ ಮೊದಲ ದೃಷ್ಟಾಂತ: ತ್ರಿವಳಿ ಸೂಪರ್​ ಓವರ್​ನಲ್ಲಿ ಗೆದ್ದ ಡಚ್ಚರು

ಗ್ಲಾಸ್ಗೋ: ಆತಿಥೇಯ ಸ್ಕಾಟ್ಲೆಂಡ್​, ನೆದರ್ಲೆಂಡ್​ ಹಾಗೂ ನೇಪಾಳ ನಡುವಿನ ತ್ರಿಕೋನ ಸರಣಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಮೊಟ್ಟ ಮೊದಲ 3 ಸೂಪರ್​ ಓವರ್​ಗೆ ಸಾಯಾಗಿದೆ. ಸೋಮವಾರ ರಾತ್ರಿ ನಡೆದ ನೇಪಾಳ ವಿರುದ್ಧ ಪಂದ್ಯದ ಮೂರನೇ ಸೂಪರ್​ ಓವರ್​ನಲ್ಲಿ ನೆದರ್ಲೆಂಡ್​ ಗೆಲುವು ದಕ್ಕಿಸಿಕೊಂಡಿದೆ. ಪಂದ್ಯ ಟೈಗೊಂಡ ಬಳಿಕ ಮೊದಲ 2 ಸೂಪರ್​ ಓವರ್​ ಕೂಡ ಟೈ ಆಗಿತ್ತು. ಕಳೆದ ವರ್ಷ ಕೆಎಸ್​ಸಿಎಯ ಮಹಾರಾಜ ಟ್ರೋಫಿ ಟಿ20ಯಲ್ಲೂ ಹುಬ್ಬಳ್ಳಿ ಟೈಗರ್ಸ್​-ಬೆಂಗಳೂರು ಬ್ಲಾಸ್ಟರ್ಸ್​ ನಡುವಿನ ಪಂದ್ಯದಲ್ಲೂ 3 ಸೂಪರ್​ ಓವರ್​ ನಡೆದಿತ್ತು. ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ- ಆಫ್ಘನ್ ನಡುವೆ 2 ಸೂಪರ್​ ಓವರ್​ ನಡೆದಿದ್ದೇ ಇದುವರೆಗಿನ ಗರಿಷ್ಠವಾಗಿತ್ತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ನೆದರ್ಲೆಂಡ್​ 7 ವಿಕೆಟ್​ಗೆ 152 ರನ್​ಗಳಿಸಿತು. ಪ್ರತಿಯಾಗಿ ನೇಪಾಳ 8 ವಿಕೆಟ್​ಗೆ 152 ರನ್​ಗಳಿಸಿ ರೋಚಕ ಟೈ ಸಾಧಿಸಿತು. ಕೊನೇ ಓವರ್​ನಲ್ಲಿ 16 ರನ್​ ಬೇಕಿತ್ತು. ಅಂತಿಮ ಎಸೆತದಲ್ಲಿ ನಂದನ್​ ಕುಮಾರ್​ ಬೌಂಡರಿ ಸಿಡಿಸಿ ಪಂದ್ಯ ಟೈಗೊಳಿಸಿದರು.

ಫಲಿತಾಂಶ ರ್ನಿಣಯಕ್ಕಾಗಿ ನಡೆದ ಮೊದಲ ಸೂಪರ್​ ಓವರ್​ನಲ್ಲಿ ನೇಪಾಳ 1 ವಿಕೆಟ್​ಗೆ 19 ರನ್​ಗಳಿಸಿತು. ಪ್ರತಿಯಾಗಿ ನೆದರ್ಲೆಂಡ್​ ತಂಡವೂ ವಿಕೆಟ್​ ನಷ್ಟವಿಲ್ಲದೆ 19 ರನ್​ಗಳಿಸಿ ಮತ್ತೆ ಟೈ ಸಾಧಿಸಿತು. ನಂತರ 2ನೇ ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ನೆದರ್ಲೆಂಡ್​ 1 ವಿಕೆಟ್​ಗೆ 17 ರನ್​ ಪೇರಿಸಿತು. ಇದಕ್ಕೆ ಉತ್ತರವಾಗಿ 2 ಸಿಕ್ಸರ್​, ಬೌಂಡರಿ ಸಿಡಿಸಿದ ನೇಪಾಳ ವಿಕೆಟ್​ ನಷ್ಟವಿಲ್ಲದೆ 17 ರನ್​ಗಳಿಸಿ ಟೈ ಮಾಡಿಕೊಂಡಿತು. ಮೂರನೇ ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ನೇಪಾಳ 4 ಎಸೆತಗಳಲ್ಲಿ ಒಂದೂ ರನ್​ ಗಳಿಸದೆ 2 ವಿಕೆಟ್​ ಕೈ ಚೆಲ್ಲಿತು. ಪ್ರತಿಯಾಗಿ ಮೈಕೆಲ್​ ಲೆವಿಟ್​ ಮೊದಲ ಎಸೆತದಲ್ಲಿ ಸಿಕ್ಸರ್​ ಸಿಡಿಸಿ ನೆದರ್ಲೆಂಡ್​ಗೆ ರೋಚಕ ಗೆಲುವು ತಂದುಕೊಟ್ಟರು.