ಕ್ರೀಡೆ

ಮ್ಯಾಡಿಸನ್​ ಕೀಯ್ಸ್​ಗೆ ಚೊಚ್ಚಲ ಗ್ರಾಂಡ್​ ಸ್ಲಾಂ ಕಿರೀಟ; ಸಬಲೆಂಕಾಗೆ ತಪ್ಪಿದ ಹ್ಯಾಟ್ರಿಕ್​ ಆಸ್ಟ್ರೆಲಿಯನ್​ ಓಪನ್​ ಗರಿ!

ಮೆಲ್ಬೋರ್ನ್​: ಅಮೆರಿಕದ ಮ್ಯಾಡಿಸನ್​ ಕೀಯ್ಸ್​ ಹ್ಯಾಟ್ರಿಕ್​ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಬೆಲಾರಸ್​ ತಾರೆ ಅರಿನಾ ಸಬಲೆಂಕಾಗೆ ಆಘಾತ ನೀಡುವ ಮೂಲಕ ಆಸ್ಟ್ರೆಲಿಯನ್​ ಓಪನ್​ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 29 ವರ್ಷದ ಕೀಯ್ಸ್​ಗೆ ಇದು ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಾಗಿದೆ.

19ನೇ ಶ್ರೇಯಾಂಕಿತೆ ಮ್ಯಾಡಿಸನ್​ ಕೀಯ್ಸ್​, ರಾಡ್​ ಲೆವರ್​ ಅರೇನಾದಲ್ಲಿ ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಹಾಗೂ ಕಳೆದ 2 ಆವೃತ್ತಿಗಳ ವಿಜೇತೆ ಸಬಲೆಂಕಾ ಎದುರು 6-3, 2-6, 7-5 ಸೆಟ್​ಗಳಿಂದ 2 ಗಂಟೆ ಮತ್ತು 2 ನಿಮಿಷಗಳ ಹೋರಾಟದಲ್ಲಿ ಗೆಲುವು ದಾಖಲಿಸಿದರು. ಸೆಮಿಫೈನಲ್​ನಲ್ಲಿ 2ನೇ ಶ್ರೇಯಾಂಕಿತೆ ಇಗಾ ಸ್ವಿಯಾಟೆಕ್​ಗೆ ಶಾಕ್​ ನೀಡಿದ್ದ ಕೀಯ್ಸ್​, ಸೆರೇನಾ ವಿಲಿಯಮ್ಸ್​ (2005) ಬಳಿಕ ಮೆಲ್ಬೋರ್ನ್​ ಪಾರ್ಕ್​ನಲ್ಲಿ ವಿಶ್ವದ ಅಗ್ರ ಇಬ್ಬರು ಶ್ರೇಯಾಂಕಿತರಿಗೆ ಸೋಲುಣಿಸಿದ ಮೊದಲ ಆಟಗಾರ್ತಿ ಎನಿಸಿದರು. ವಿಶ್ವ ನಂ. 14 ಕೀಯ್ಸ್​ ಈ ಮುನ್ನ 2017ರ ಯುಎಸ್​ ಓಪನ್​ನಲ್ಲಿ ಮೊದಲ ಬಾರಿ ಗ್ರಾಂಡ್​ ಸ್ಲಾಂ ಫೈನಲ್​ ಆಡಿದ್ದರೂ, ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಮಾರ್ಟಿನಾ ಹಿಂಗಿಸ್​ (1997-99) ಬಳಿಕ ಆಸ್ಟ್ರೆಲಿಯನ್​ ಓಪನ್​ನಲ್ಲಿ ಹ್ಯಾಟ್ರಿಕ್​ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎನಿಸುವ ಸಬಲೆಂಕಾ ಕನಸು ಭಗ್ನಗೊಂಡಿತು. ಜತೆಗೆ 4ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿಯೂ ಕೈತಪ್ಪಿದೆ. 2ನೇ ಸೆಟ್​ ಗೆದ್ದು ತಿರುಗೇಟು ನೀಡಲು ಯತ್ನಿಸಿದ 26 ವರ್ಷದ ಸಬಲೆಂಕಾ, ಕೊನೇ ಸೆಟ್​ನಲ್ಲಿ ಒಮ್ಮೆ ಮ್ಯಾಚ್​ ಪಾಯಿಂಟ್​ ರಕ್ಷಿಸಿಕೊಂಡರೂ ಗೆಲ್ಲಲು ಸಾಧ್ಯವಾಗಲಿಲ್ಲ.

ಮ್ಯಾಡಿಸನ್​ ಕೀಯ್ಸ್​ಗೆ ಪತಿ ಬೋರ್ನ್​ ಫ್ರಾಟಂಗೆಲೊ ಅವರೇ 2023ರಿಂದ ಕೋಚ್​ ಆಗಿದ್ದು, ಗೆಲುವಿನ ಬಳಿಕ ಪತಿಯನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಫ್ಲಾವಿಯಾ ಪೆನ್ನೆಟ್ಟಾ ಬಳಿಕ ಚೊಚ್ಚಲ ಗ್ರಾಂಡ್​ ಸ್ಲಾಂ ಗೆದ್ದ ಅತಿಹಿರಿಯ ಆಟಗಾರ್ತಿ ಎಂಬ ಸಾಧನೆ ಕೀಯ್ಸ್​ ಅವರದಾಗಿದೆ. ಪೆನ್ನೆಟ್ಟಾ 2015ರಲ್ಲಿ 33ನೇ ವಯಸ್ಸಿನಲ್ಲಿ ಯುಎಸ್​ ಓಪನ್​ನಲ್ಲಿ ಚೊಚ್ಚಲ ಗ್ರಾಂಡ್​ ಸ್ಲಾಂ ಗೆದ್ದಿದ್ದರು.

ಮ್ಯಾಡಿಸನ್​ ಕೀಯ್ಸ್​ ತಾನಾಡಿದ 46ನೇ ಗ್ರಾಂಡ್​ ಸ್ಲಾಂನಲ್ಲಿ ಚೊಚ್ಚಲ ಪ್ರಶಸ್ತಿ ಒಲಿಸಿಕೊಂಡರು. ಫ್ಲಾವಿಯಾ ಪೆನ್ನೆಟ್ಟಾ (49) ಮತ್ತು ಮರಿಯನ್​ ಬಾತೋರ್ಲಿ (47) ಮಾತ್ರ ಚೊಚ್ಚಲ ಪ್ರಶಸ್ತಿಗಾಗಿ ಇವರಿಗಿಂತ ಹೆಚ್ಚು ಕಾದ ಆಟಗಾರ್ತಿಯರಾಗಿದ್ದಾರೆ.