ಬೆಂಗಳೂರು: ಲಾಕ್ಡೌನ್ನಿಂದಾಗಿ ಕಳೆದ ಮೂರು ತಿಂಗಳಿಂದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರದಲ್ಲೇ ಲಾಕ್ ಆಗಿದ್ದ ಭಾರತ ಪುರುಷರ ಹಾಗೂ ಮಹಿಳಾ ತಂಡದ ಸದಸ್ಯರು ಕೊನೆಗೂ ಮನೆಗೆ ಮರಳಿದ್ದಾರೆ. ಇನ್ನು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಗಿದೆ.
ಮಾರ್ಚ್ 25ರಿಂದ ಸಾಯ್ ಕೇಂದ್ರದಲ್ಲೇ ಆಟಗಾರರು ಲಾಕ್ ಆಗಿದ್ದರು. ಹಾಕಿ ಇಂಡಿಯಾ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಆಟಗಾರರು ತವರಿನತ್ತ ಪ್ರಯಾಣ ಬೆಳೆಸಿದರು. ಎರಡು ತಂಡಗಳ ಕೋಚ್ಗಳೊಂದಿಗೆ ಚರ್ಚೆ ನಡೆಸಿದ ಬಳಿಕ, ಹೋಮ್ಕ್ನಿಂದ ಬಳಲುತ್ತಿದ್ದ ಆಟಗಾರರಿಗೆ ಕೆಲಕಾಲ ವಿಶ್ರಾಂತಿ ನೀಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮದ್ ಮುಷ್ತಾಕ್ ಅಹಮದ್ ತಿಳಿಸಿದ್ದಾರೆ. ರಜೆ ವೇಳೆ ಆಟಗಾರರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕಳೆದ 3-4 ತಿಂಗಳಿಂದ ಆಟಗಾರರು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ. ಬಿಡುವಿನ ವೇಳೆಯನ್ನೂ ಜವಾಬ್ದಾರಿಯುತವಾಗಿ ನಿರ್ವಹಿಸಲಿ ಎಂದಿದ್ದಾರೆ. ಕ್ರೀಡಾ ಸಚಿವ ಕಿರಣ್ ರಿಜಿಜು ಜತೆ ಇತ್ತೀಚೆಗೆ ನಡೆದ ವಿಡಿಯೋ ಸಂವಾದದಲ್ಲಿ ಆಟಗಾರರು, ಮನೆಗಳಿಗೆ ತೆರಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು. ಎರಡೂ ತಂಡ ಜು. 19ರಂದು ಸಾಯ್ ಕೇಂದ್ರಕ್ಕೆ ವಾಪಸ್ ಆಗಲಿವೆ.
ತವರಿಗೆ ತೆರಳಲು ಕೆಲ ಆಟಗಾರರ ನಕಾರ: ಮುಂಬೈನಲ್ಲಿ ಕೋವಿಡ್-19ರ ಅಬ್ಬರವಿರುವ ಹಿನ್ನೆಲೆಯಲ್ಲಿ ಪುರುಷರ ತಂಡದ ಗೋಲ್ಕೀಪರ್ ಸೂರಜ್ ಕರ್ಕೆರಾ ಸಾಯ್ ಕೇಂದ್ರದಲ್ಲೇ ಉಳಿದುಕೊಂಡರೆ, ತವರು ರಾಜ್ಯಗಳಲ್ಲಿ ಇರುವ ಕೋವಿಡ್-19ರ ಶಿಷ್ಟಾಚಾರದಿಂದಾಗಿ ಮಹಿಳಾ ತಂಡದ ವಂದನಾ ಕಟಾರಿಯಾ, ಸುಶೀಲಾ ಚಾನು, ಲಾಲ್ರೆಮ್ಯಾಮಿ ಕೂಡ ತವರಿಗೆ ತೆರಳಲು ನಿರಾಕರಿಸಿದರು. ಸುಶೀಲಾ ಮಣಿಪುರ, ವಂದನಾ ಉತ್ತರಾಖಂಡ್ ಹಾಗೂ ಲಾಲ್ರೆಮ್ಯಾಮಿ ಮಿಜೋರಾಂ ರಾಜ್ಯದವರಾಗಿದ್ದಾರೆ.