ಪರ್ತ್: ಬಹು ನಿರೀಕ್ಷಿತ ಭಾರತ ಹಾಗೂ ಆತಿಥೇಯ ಆಸ್ಟ್ರೇಲಿಯಾ ತಂಡಗಳ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭಕ್ಕೆ ಕೇವಲ ಒಂದು ದಿನ ಬಾಕಿಯಿದ್ದು, ಶುಕ್ರವಾರ ಪರ್ತ್‌ನಲ್ಲಿ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ ಭಾರತ ಆಡುವ ಹನ್ನೊಂದರ ಬಳಗದ ಆಯ್ಕೆಯೂ ಕುತೂಹಲ ಮೂಡಿಸಿದೆ. 22 ಯಾರ್ಡ್ಸ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಿರ್ಮಾಣಗೊಂಡಿರುವ ಹಸಿರು ಮತ್ತು ತೇವಾಂಶದ ಬೌನ್ಸಿ ಪಿಚ್ ವೇಗದ ವೇಗದ ಬೌಲರ್‌ಗಳ ಸ್ವರ್ಗ ಎನಿಸಿದ್ದು, ಭಾರತ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.
ಕಾಯಂ ನಾಯಕ ರೋಹಿತ್ ಶರ್ಮ ಹಾಗೂ ಗಾಯಳು ಶುಭಮಾನ್ ಗಿಲ್ ಗೈರಿನಲ್ಲಿ ಭಾರತ ದ ಬ್ಯಾಟಿಂಗ್ ಕ್ರಮಾಂಕದ ಸಂಯೋಜನೆ ಕೋಚ್ ಗೌತಮ್ ಗಂಭೀರ್ ಮುಂದಿರುವ ಪ್ರಮುಖ ಸವಾಲೆನಿಸಿದೆ. ಪರ್ತ್ ಟೆಸ್ಟ್‌ಗೆ ಸಿದ್ಧಗೊಂಡಿರುವ ಡ್ರಾಪ್ ಇನ್ ಪಿಚ್‌ಭಾರತೀಯ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡುವ ಭೀತಿ ಎದುರಾಗಿದ್ದು, ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಜತೆಯಾಗಿ ಕನ್ನಡಿಗ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಾತ್ರಿ ಎನಿಸಿದೆ. ಗಾಯಾಳು ಶುಭಮಾನ್ ಗಿಲ್ ಲಭ್ಯತೆಯ ಬಗ್ಗೆ ಇದುವರೆಗೂ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಒಂದು ವೇಳೆ ಶುಭಮಾನ್ ಮೊದಲ ಟೆಸ್ಟ್‌ಗೆ ಅಲಭ್ಯರಾದರೆ, ಕೊನೇ ಕ್ಷಣದಲ್ಲಿ ತಂಡ ಕೂಡಿಕೊಂಡಿರುವ ಮತ್ತೋರ್ವ ಕನ್ನಡಿಗ ದೇವದತ್ ಪಡಿಕಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಹರಡಿದೆ. ಆಸ್ಟ್ರೇಲಿಯಾ ಎ ವಿರುದ್ಧ ಚರ್ತುದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಪಡಿಕ್ಕಲ್‌ಗೆ ಇದು ಟೆಸ್ಟ್ ತಂಡಕ್ಕೆ ಪುನರಾಗಮನವೂ ಎನಿಸಿದೆ. ಹಾಲಿ ವರ್ಷ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಪಡಿಕ್ಕಲ್, ಆಕರ್ಷಕ ಅರ್ಧಶತಕಗಳಿಸಿದ್ದರು. ನಂತರ ಬಾಂಗ್ಲಾದೇಶ ಹಾಗೂ ಕಿವೀಸ್ ವಿರುದ್ಧ ಸರಣಿಯಿಂದ ಅವರನ್ನು ಕೈ ಬಿಡಲಾಗಿತ್ತು.
ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುವ ವಿರಾಟ್ ಕೊಹ್ಲಿ, ಟೆಸ್ಟ್‌ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಇತ್ತೀಚೆಗೆ ತವರಿನಲ್ಲಿ ಕಿವೀಸ್ ವಿರುದ್ಧದ ಸರಣಿಯಲ್ಲಿ ವನ್‌ಡೌನ್ ಬ್ಯಾಟರ್ ಆಗಿ ಕಣಕ್ಕಿಳಿದ ಕೊಹ್ಲಿಗೆ ರನ್ ಬರ ಎದುರಿಸಿದರು. ಇದರಿಂದ ಕೊಹ್ಲಿ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕ್ರಮವಾಗಿ 4,5ನೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
6ನೇ ಕ್ರಮಾಂಕದಲ್ಲಿ ಜುರೆಲ್?
ಕಿವೀಸ್ ವಿರುದ್ಧದ ಬೆಂಗಳೂರಿನ ಟೆಸ್ಟ್‌ನಲ್ಲಿ ಶತಕಗಳಿಸಿದ ಬಳಿಕ ನೀರಸ ಪ್ರದರ್ಶನ ನೀಡಿದ ಮುಂಬೈ ಬ್ಯಾಟರ್ ಸರ್ಪ್ರಾಜ್ ಖಾನ್ ಹಾಗೂ ಯುವ ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ ನಡುವೆ ಆರನೇ ಕ್ರಮಾಂಕಕ್ಕೆ ಪೈಪೋಟಿ ಏರ್ಪಟ್ಟಿದೆ. ಭಾರತ ಎ ವಿರುದ್ಧ ಚತುರ್ದಿನ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕಗಳಿಸಿರುವ ಜುರೆಲ್ ಗಮನ ಸೆಳೆದರು. ಜತೆಗೆ ಭಾರತ ತಂಡ ವಾಕಾದಲ್ಲಿ ಫೀಲ್ಡಿಂಗ್ ಅಭ್ಯಾಸ ನಡೆಸುವಾಗಲೂ ಜುರೆಲ್ ಮೂರನೇ ಸ್ಪಿಪ್‌ನಲ್ಲಿ ಕಾಣಿಸಿಕೊಂಡರು. ಇದು ಸರಣಿಯ ಆರಂಭಿಕ ಪಂದ್ಯದಲ್ಲಿ ಜುರೆಲ್ ಸ್ಥಾನ ಪಡೆಯುವ ಸುಳಿವು ಎನ್ನಲಾಗಿದೆ.
ಅಶ್ವಿನ್ ಏಕೈಕ ಸ್ಪಿನ್ನರ್?
ಮೊದಲ ಟೆಸ್ಟ್‌ನಲ್ಲಿ ಭಾರತ ಏಕೈಕ ಸ್ಪಿನ್ನರ್ ಆಡಿಸುವ ಕಾರ್ಯಯೋಜನೆ ರೂಪಿಸಿದೆ ಎನ್ನಲಾಗಿದೆ. ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್‌ಗಳಾದ ಉಸ್ಮಾನ್ ಖವಾಜ, ಟ್ರಾವಿಸ್ ಹೆಡ್ ಹಾಗೂ ಅಲೆಕ್ಸ್ ಕ್ಯಾರಿ ಎಡಗೈ ಬ್ಯಾಟರ್‌ಗಳಾಗಿದ್ದು, ಇವರನ್ನು ಕಟ್ಟಿಹಾಕಲು ಅನುಭವಿ ಆ್ ಸ್ಪಿನ್ನರ್ ಆರ್. ಅಶ್ವಿನ್‌ಗೆ ಪ್ರಮುಖ ಅಸ ಎನಿಸಿದ್ದಾರೆ. ಬ್ಯಾಟಿಂಗ್‌ನಲ್ಲೂ ಅಶ್ವಿನ್ ಉಪಯುಕ್ತ ಕೊಡುಗೆ ನೀಡಬಲ್ಲರು. ಜತೆಗೆ ಭಾರತ ತಂಡ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠಗೊಳಿಸಲು ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ಕಲ್ಪಿಸಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
ಬುಮ್ರಾಗೆ ಸಿರಾಜ್ ಸಾಥ್
ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ ಮುನ್ನಡೆಸುವುದರ ಜತೆಗೆ ಬೌಲಿಂಗ್ ವಿಭಾಗದ ಜವಾಬ್ದಾರಿ ಹೊಂದಿದ್ದಾರೆ. ಇವರಿಗೆ ಮೊಹಮದ್ ಸಿರಾಜ್ ಎರಡನೇ ವೇಗಿ ಸಾಥ್ ನೀಡಲಿದ್ದಾರೆ. ಮೂರನೇ ವೇಗಿ ಸ್ಥಾನಕ್ಕೆ ಆಕಾಶ್ ದೀಪ್, ಪ್ರಸಿದ್ಧ ಕೃಷ್ಣ ಹಾಗೂ ಹರ್ಷಿತ್ ರಾಣಾ ನಡುವೆ ಪೈಪೋಟಿ ಏರ್ಪಡಲಿದೆ. ಹಿಂದಿನ ಆಸೀಸ್ ಪ್ರವಾಸದಲ್ಲಿ ಸಿರಾಜ್ ಭಾರತ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಎನಿಸಿದ್ದಾರೆ.
ಖಲೀಲ್ ಬದಲಿಗೆ ದಯಾಳ್ ಸೇರ್ಪಡೆ
ಪರ್ತ್: ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಭಾರತ ಟೆಸ್ಟ್ ತಂಡದ ಮೀಸಲು ವೇಗಿ ಖಲೀಲ್ ಅಹ್ಮದ್ ಗಾಯದ ಸಮಸ್ಯೆಯಿಂದ ತವರಿಗೆ ವಾಪಸ್ ಆಗಿದ್ದಾರೆ. ಖಲೀಲ್ ಬದಲಿಗೆ ಯಶ್ ದಯಾಳ್ ಸೇರ್ಪಡೆಗೊಂಡಿದ್ದಾರೆ. ಬಾರ್ಡರ್-ಗಾವಸ್ಕರ್ ಟ್ರೋಫಿಗೆ ಮುನ್ನ ಭಾರತ ಟೆಸ್ಟ್ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಖಲೀಲ್ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದು, ನೆಟ್ಸ್‌ನಲ್ಲಿ ಬೌಲಿಂಗ್ ನಡೆಸಲಾಗದೆ ಪರ್ತ್‌ನಿಂದ ತವರಿಗೆ ಹಿಂದಿರುಗಿದ್ದಾರೆ. ರಾಜಸ್ಥಾನನ ವೇಗಿ ಖಲೀಲ್ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ತಿಳಿಸಿದೆ. ಬಾಂಗ್ಲಾದೇಶ ಹಾಗೂ ದ.ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಭಾರತ ತಂಡದ ಭಾಗವಾಗಿದ್ದ ದಯಾಳ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬೇಕಿದೆ.
ಗಿಲ್ ಚೇತರಿಕೆ
ವಾಕಾದಲ್ಲಿ ಫೀಲ್ಡಿಂಗ್ ಅಭ್ಯಾಸ ವೇಳೆ ಎಡಗೈ ಹೆಬ್ಬೆರಳಿಗೆ ಗಾಯಮಾಡಿಕೊಂಡಿರು ಶುಭಮಾನ್ ಗಿಲ್ ಚೇತರಿಸಿಕೊಳ್ಳುತ್ತಿದ್ದು, ಅವರ ಫಿಟ್ನೆಸ್ ಬಗ್ಗೆ ಪ್ರತಿದಿನ ಟ್ರ್ಯಾಕ್ ಮಾಡಲಾಗುತ್ತಿದೆ. ಪರ್ತ್ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮುನ್ನ ಗಿಲ್ ಆಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೌಲಿಂಗ್ ಕೋಚ್ ಮಾರ್ನೆ ಮೊರ್ಕೆಲ್ ಬುಧವಾರ ಮಾಹಿತಿ ನೀಡಿದರು.