ಕ್ರೀಡೆ

ಬ್ರೆಜಿಲ್ ಫುಟ್​ಬಾಲ್​ಗೆ ಫಿಫಾದಿಂದ ನಿಷೇಧದ ಭೀತಿ!

ರಿಯೋ ಡಿ ಜನೈರೋ: ಬ್ರೆಜಿಲ್​ನ ರಾಷ್ಟ್ರೀಯ ಮತ್ತು ಕ್ಲಬ್​ ಫುಟ್​ಬಾಲ್​ ತಂಡಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಿಂದ ನಿಷೇಧಕ್ಕೆ ಒಳಗಾಗುವ ಭೀತಿಯಲ್ಲಿವೆ. ಬ್ರೆಜಿಲ್​ ಫುಟ್​ಬಾಲ್​ ಸಂಸ್ಥೆಯಲ್ಲಿ (ಸಿಬಿಎಫ್​) ಮೂರನೆಯವರ ಹಸ್ತಕ್ಷೇಪದಿಂದಾಗಿ ಈ ಭೀತಿ ಎದುರಾಗಿದೆ.

ಬ್ರೆಜಿಲ್ ಫುಟ್​ಬಾಲ್​ ಸಂಸ್ಥೆಯ ಅಧ್ಯಕ್ಷ ಎಡ್ನಾಲ್ಡೊ ರೋಡ್ರಿಗಸ್​ರನ್ನು ಆರ್ಥಿಕ ಅವ್ಯವಹಾರಗಳ ಆರೋಪದ ಮೇರೆಗೆ ಬ್ರೆಜಿಲ್​ ಕೋರ್ಟ್​ ಇತ್ತೀಚೆಗೆ ವಜಾಗೊಳಿಸಿದ್ದು, ಜನವರಿಯಲ್ಲಿ ಹೊಸದಾಗಿ ಚುನಾವಣೆ ಆಯೋಜಿಸಲು ಸೂಚಿಸಿದೆ. ಇದನ್ನು ಮೂರನೆಯವರ ಹಸ್ತಕ್ಷೇಪವೆಂದು ಪರಿಗಣಿಸಿರುವ ವಿಶ್ವ ಫುಟ್​ಬಾಲ್​ ಆಡಳಿತ ಸಂಸ್ಥೆ ಫಿಫಾ, ಸಿಬಿಎಫ್​ಅನ್ನು ನಿಷೇಧಿಸುವ ಎಚ್ಚರಿಕೆ ರವಾನಿಸಿದೆ.

ಫಿಫಾ ತನ್ನ ಸದಸ್ಯ ರಾಷ್ಟ್ರೀಯ ಸಂಸ್ಥೆಗಳಲ್ಲಿ ಸರ್ಕಾರ, ನ್ಯಾಯಾಲಯ ಅಥವಾ ಬೇರಾವುದೇ ಮೂರನೆಯವರ ಹಸ್ತಕ್ಷೇಪವನ್ನು ಒಪ್ಪುವುದಿಲ್ಲ. ಹೀಗಾಗಿ 5 ಬಾರಿಯ ಫಿಫಾ ವಿಶ್ವಕಪ್​ ಚಾಂಪಿಯನ್​ ಬ್ರೆಜಿಲ್​ಗೆ ಈ ವಿವಾದ ಬಗೆಹರಿಯುವವರೆಗೆ ಅಂತಾರಾಷ್ಟ್ರೀಯ ಸ್ಪರ್ಧೆಯಿಂದ ಹೊರಗುಳಿಯಬೇಕಾದ ಆತಂಕ ಎದುರಾಗಿದೆ.