ಪಣಜಿ: ಫಿಡೆ ಚೆಸ್ ವಿಶ್ವಕಪ್ 11ನೇ ಆವೃತ್ತಿಯ ಟೂರ್ನಿಗೆ ಶುಕ್ರವಾರ ಗೋವಾದಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಶನಿವಾರದಿಂದ ಪಂದ್ಯಗಳು ನಡೆಯಲಿವೆ. ಟೂರ್ನಿಯ ವಿಜೇತರಿಗೆ ನೀಡಲಾಗುವ ಟ್ರೋಫಿಗೆ ಆತಿಥೇಯ ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರ ಹೆಸರು ಇಡಲಾಗಿದೆ. ಈ ಮೂಲಕ 5 ಬಾರಿಯ ವಿಶ್ವ ಚಾಂಪಿಯನ್ ಆಟಗಾರನಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.
ಭಾರತದ ರಾಷ್ಟ್ರೀಯ ಪ ನವಿಲಿನ ಆಕೃತಿಯಿರುವ ಟ್ರೋಫಿ ಇದಾಗಿದೆ. 24 ಭಾರತೀಯರ ಸಹಿತ 80 ದೇಶಗಳ ಒಟ್ಟು 206 ಆಟಗಾರರು ಟೂರ್ನಿಯಲ್ಲಿ 8 ನಾಕೌಟ್ ಸುತ್ತುಗಳಲ್ಲಿ ಟ್ರೋಫಿಗಾಗಿ ಹೋರಾಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಹಾಜರಿದ್ದರು.