ಬೆಂಗಳೂರು: ಚೀನಾದ ಸಿಚುವಾನ್ ಯುಯಾಂದ ಮೀಲೆ ಸತತ ಎರಡನೇ ಬಾರಿಗೆ ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಪ್ರಶಸ್ತಿ ಜಯಿಸುವ ತವಕದಲ್ಲಿದ್ದು, ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಜಪಾನ್ನ ಡೆನ್ಸೂ ಐರಿಸ್ ಎದುರು ಚಾಂಪಿಯನ್ಪಟ್ಟಕ್ಕಾಗಿ ಸೆಣಸಲಿದೆ.
ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡ 93-74 ಅಂಕಗಳಿಂದ ಕೊರಿಯಾದ ಕೆ.ಬಿ.ಸ್ಟಾರ್ಸ್ ತಂಡವನ್ನು ಸೋಲಿಸಿದರೆ, ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ನ ಡೆನ್ಸೊ ಐರಿಸ್ ತಂಡ 86-78 ಅಂಕಗಳಿಂದ ಚೀನಾ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ತಂಡವನ್ನು ಮಣಿಸಿ ಫೈನಲ್ಗೇರಿತು. ಸಿಚುವಾನ್ಗೆ ಸುಲಭ ಜಯ
ಮೊದಲ ಸೆಮಿಫೈನಲ್ನಲ್ಲಿ ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡ 93&74 ಅಂಕಗಳಿಂದ ಕೊರಿಯಾದ ಕೆ.ಬಿ.ಸ್ಟಾರ್ಸ್ ತಂಡವನ್ನು ಮಣಿಸಿತು. 2024ರ ಚಾಂಪಿಯನ್ ಸಿಚುವಾನ್ ಯುಯಾಂದ ಮೀಲೆ ಭರ್ಜರಿ ನಿರ್ವಹಣೆ ಎದುರು ಕೊರಿಯಾ ತಂಡದ ಆಟಗಾರ್ತಿಯರು ಸಂಪೂರ್ಣ ಮಂಕಾದರು. ಮೊದಲ ಕ್ವಾರ್ಟರ್ನಲ್ಲೆ 26-18 ಅಂಕಗಳಿಂದ ಮುನ್ನಡೆ ಸಾಧಿಸಿದ್ದ ಚೀನಾ ತಂಡ, ಮೊದಲಾರ್ಧದಲ್ಲಿ 51-31 ಅಂಕಗಳಿಂದ ಮುನ್ನಡೆ ಕಂಡಿತು.
ಈ ಮೂಲಕ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಪಡೆದ ಚೀನಾ ತಂಡದ ಪರ ಡಬ್ಲು ಎನ್ಬಿಎಲ್ ಆಟಗಾರ್ತಿ, ಅಮೆರಿಕ ಮೂಲದ ಕೆನ್ನಡಿ ಕಾರ್ಟರ್ (31 ಅಂಕ), ಸಾರಾ ಬ್ಲಿಕ್ವಾಸ್ ಹಾಗೂ ನಾಯಕಿ ಸಾಂಗ್ ಗೋವ್ ತಲಾ 22 ಅಂಕ ಕಲೆಹಾಕಿದರು.
ಐರಿಸ್-ಟೈಗರ್ಸ್ ಸಮಬಲದ ಹೋರಾಟ
ಎರಡನೇ ಸೆಮಿಫೈನಲ್ ಮುಖಮುಖಿಯಲ್ಲಿ ಡೆನ್ಸೊ ಐರಿಸ್ ಹಾಗೂ ಕ್ಯಾಥೆ ಲೈಫ್ ಟೈಗರ್ಸ್ ಸಮಬಲದ ಪೈಪೋಟಿ ನಡೆಸಿದವು. ಆರಂಭಿಕ ಹಂತದಲ್ಲಿ ಕ್ಯಾಥೆ ಲೈಫ್ ಟೈಗರ್ಸ್ ಮುನ್ನಡೆ ಸಾಧಿಸಿದರೂ ಡೆನ್ಸೊ ಐರಿಸ್ ತಿರುಗೇಟು ನೀಡಿತು. ಇದರಿಂದ ಮೊದಲಾರ್ಧದಲ್ಲಿ ಡೆನ್ಸೊ ಐರಿಸ್ ತಂಡ 48&35 ಅಂಕಗಳಿಂದ ಮುನ್ನಡೆ ಸಾಧಿಸಿತು. ಬಳಿಕ ಎರಡನೇ ಮೂರನೇ ಕ್ವಾರ್ಟರ್ ನಲ್ಲಿ ಸಮಬಲ ಹೋರಾಟ ನಡೆದರೂ ಡೆನ್ಸೊ ಐರಿಸ್ ತಂಡ ಗೆಲುವಿನ ನಗೆ ಬೀರಿತು. ಮೂರನೇ ಸ್ಥಾನಕ್ಕಾಗಿ ಪಂದ್ಯ ಕೆ.ಬಿ.ಸ್ಟಾರ್ಸ್&ಕ್ಯಾಥೆ ಲೈಫ್ ಟೈಗರ್ಸ್ ತಂಡ ಕಾದಾಟ ನಡೆಸಲಿವೆ.
ರೈಲ್ವೇಸ್ ತಂಡಕ್ಕೆ ಸೋಲು
ರೈಲ್ವೇಸ್ ತಂಡ 5 ಹಾಗೂ 6ನೇ ಸ್ಥಾನಕ್ಕಾಗಿ ನಡೆದ ಕ್ಲಾಸಿಫಿಕೇಷನ್ ಹಣಾಹಣಿಯಲ್ಲಿ ಫಿಲಿಫೈನ್ಸ್ನ ಅಕಾರಿ ಸ್ಪಾರ್ಕ್ಸ್ ಎದುರು ಸೋಲನುಭವಿಸಿತು. ಅಂತಿಮ ಅವಧಿಯಾಟದಲ್ಲಿ ಪ್ರಬಲ ಹೋರಾಟ ತೋರಿದರೂ ರೈಲ್ವೇಸ್ ತಂಡ 56&86 ಅಂಕಗಳಿಂದ ಫಿಲಿಫೈನ್ಸ್ನ ಅಕಾರಿ ಸ್ಪಾರ್ಕ್ಸ್ ತಂಡಕ್ಕೆ ಶರಣಾಯಿತು. ಇದರಿಂದ ಲೀಗ್ನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ರೈಲ್ವೇಸ್ ತಂಡ ಸೋಲು ಕಂಡಿತು.
ಫೈನಲ್ ಪಂದ್ಯ
ಸಿಚುವಾನ್ ಯುಯಾಂದ ಮೀಲೆ& ಡೆನ್ಸೊ ಐರಿಸ್
ಆರಂಭ: ರಾತ್ರಿ 7 ಗಂಟೆಗೆ