ಫೆಡರೇಷನ್​ ಕಪ್​ ಅಥ್ಲೆಟಿಕ್ಸ್​: ಕರ್ನಾಟಕದ ಪರಶುರಾಮ್​, ಯಶಸ್​ಗೆ ಸ್ವರ್ಣ ಪದಕ 
ಕ್ರೀಡೆ

ಫೆಡರೇಷನ್​ ಕಪ್​ ಅಥ್ಲೆಟಿಕ್ಸ್​: ಕರ್ನಾಟಕದ ಪರಶುರಾಮ್​, ಯಶಸ್​ಗೆ ಸ್ವರ್ಣ ಪದಕ

ಬೆಂಗಳೂರು: ಕರ್ನಾಟಕದ ಶಿವಾಜಿ ಪರಶುರಾಮ್​ ಮತ್ತು ಯಶಸ್​ ಪಿ. ರಾಂಚಿಯಲ್ಲಿ ನಡೆಯುತ್ತಿರುವ 29ನೇ ರಾಷ್ಟ್ರೀಯ ಸೀನಿಯರ್​ ಫೆಡರೇಷನ್​ ಕಪ್​ ಅಥ್ಲೆಟಿಕ್ಸ್​ (Federation Cup Athletics) ಕೂಟದ 4ನೇ ಹಾಗೂ ಅಂತಿಮ ದಿನ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ರಾಜ್ಯದ ಸಿಂಚಲ್​ ಕಾವೇರಮ್ಮ ರಜತ ಪದಕ ಮತ್ತು ಅಭಿನಯಾ ಶೆಟ್ಟಿ ಕಂಚಿನ ಪದಕ ಜಯಿಸಿದ್ದಾರೆ.

ಬಿರ್ಸಾ ಮುಂಡಾ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪುರುಷರ 5 ಸಾವಿರ ಮೀ. ಓಟದಲ್ಲಿ ಶಿವಾಜಿ ಪರಶುರಾಮ್​ 14 ನಿಮಿಷ, 14.43 ಸೆಕೆಂಡ್​ಗಳಲ್ಲಿ ಮೊದಲಿಗರಾಗಿ ಸ್ಪರ್ಧೆ ಮುಗಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಬೆಂಗಳೂರಿನ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರವನ್ನು (ಎನ್​ಸಿಒಇ) ಪ್ರತಿನಿಧಿಸಿದ ಸಿಂಚಲ್​ ಕಾವೇರಮ್ಮಮಹಿಳೆಯರ 400 ಮೀ. ಹರ್ಡಲ್ಸ್​ನಲ್ಲಿ 57.77 ಸೆಕೆಂಡ್​ಗಳಲ್ಲಿ ಓಡಿ ರಜತ ಪದಕ ಗೆದ್ದುಕೊಂಡರು. ಜೆಎಸ್​ಡಬ್ಲ್ಯು ಪ್ರತಿನಿಧಿಸಿದ ಅಭಿನಯಾ ಶೆಟ್ಟಿ ಮಹಿಳೆಯರ ಹೈಜಂಪ್​ ಸ್ಪರ್ಧೆಯಲ್ಲಿ 1.73 ಮೀ. ಎತ್ತರ ಜಿಗಿಯುವ ಮೂಲಕ ಕಂಚಿನ ಪದಕ ಜಯಿಸಿದರು.
ಕಾಮನ್ವೆಲ್ತ್​ಗೆ ಯಶಸ್​ ಅರ್ಹ
ಯಶಸ್​ ಪಿ. ಪುರುಷರ 400 ಮೀ. ಹರ್ಡಲ್ಸ್​ನಲ್ಲಿ 49 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಬಂಗಾರ ಒಲಿಸಿಕೊಂಡರು. ಈ ಮೂಲಕ ಅವರು ಮುಂಬರುವ ಕಾಮನ್ವೆಲ್ತ್​ ಗೇಮ್ಸ್​ಗೂ ಅರ್ಹತೆ ಪಡೆದುಕೊಂಡಿದ್ದಾರೆ. ಭಾರತೀಯ ಅಥ್ಲೆಟಿಕ್ಸ್​ ಸಂಸ್ಥೆ ನಿಗದಿಪಡಿಸಿದ್ದ ಮಾನದಂಡದ ಪ್ರಕಾರ, ಕಾಮನ್ವೆಲ್ತ್​ ಗೇಮ್ಸ್​ ಅರ್ಹತೆಗೆ ಕನಿಷ್ಠ 50.27 ಸೆಕೆಂಡ್​ಗಳಲ್ಲಿ ಓಡಬೇಕಿತ್ತು.