ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಟೂರ್ನಿಯ ಆರಂಭಿಕ 3 ಪಂದ್ಯಗಳಲ್ಲಿ ಅಸ್ಥಿರ ನಿರ್ವಹಣೆ ತೋರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-17ರಲ್ಲಿ ಮಂಗಳವಾರ ನಡೆಯಲಿರುವ ತನ್ನ 4ನೇ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ಜೈಂಟ್ಸ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಹಳಿಗೆ ಮರಳುವ ಹಂಬಲದಲ್ಲಿದೆ. ಪ್ರವಾಸಿ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ಕಾಯಂ ನಾಯಕರಾಗಿದ್ದ, ರಾಜ್ಯದ ಎಡಗೈ ಬ್ಯಾಟರ್ ದೇವದತ್ ಪಡಿಕಲ್ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಇದು ಚಿನ್ನಸ್ವಾಮಿ ಅಂಗಣದಲ್ಲಿ ಕರ್ನಾಟಕದ ತಂಡಕ್ಕೆ ಕನ್ನಡಿಗರೇ ಸವಾಲೊಡ್ಡುವ ಪಂದ್ಯವೆನಿಸಿದೆ.
ಉದ್ಘಾಟನಾ ಪಂದ್ಯದ ಸೋಲಿನ ಬಳಿಕ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಪಂಜಾಬ್ ಎದುರು ಗೆದ್ದಿದ್ದ ಆರ್ಸಿಬಿ, ಕಳೆದ ಪಂದ್ಯದಲ್ಲಿ ಕೆಕೆಆರ್ ಎದುರು ಎಡವಿತ್ತು. ಈ ಮೂಲಕ ಹಾಲಿ ಆವೃತ್ತಿಯಲ್ಲಿ ತವರಿನಲ್ಲೇ ಸೋತ ಮೊದಲ ತಂಡವೆನಿಸಿತ್ತು. ಜತೆಗೆ ದೊಡ್ಡ ಅಂತರದ ಸೋಲು ಫಾಫ್ ಡು ಪ್ಲೆಸಿಸ್ ಬಳಗದ ರನ್ರೇಟ್ಗೂ ಭಾರಿ ಹೊಡೆತ ನೀಡಿದೆ. ಹೀಗಾಗಿ ಆರ್ಸಿಬಿ ಮುಂದಿನ ಪಂದ್ಯಗಳಲ್ಲಿ ಗೆಲುವಿನೊಂದಿಗೆ ರನ್ರೇಟ್ ಸುಧಾರಿಸಲು ಕೂಡ ಪ್ರಯತ್ನಿಸಬೇಕಾಗಿದೆ.
ಕೊಹ್ಲಿಗೆ ಬೇಕಿದೆ ಬೆಂಬಲ
ಮೊದಲ 3 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 181 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಆರ್ಸಿಬಿ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಏಕಾಂಗಿ ಆಸರೆ ಒದಗಿಸಿದ್ದಾರೆ. ಅವರಿಗೆ ತಂಡದ ಇತರ ಬ್ಯಾಟರ್ಗಳಿಂದ, ಅದರಲ್ಲೂ ಪ್ರಮುಖವಾಗಿ ವಿದೇಶಿ ಬ್ಯಾಟರ್ಗಳಿಂದ ಬೆಂಬಲ ಅಗತ್ಯವಾಗಿದೆ. ಕೆಕೆಆರ್ ಎದುರು ಕೊಹ್ಲಿ ಇತರರಿಂದ ಸಮರ್ಥ ಬೆಂಬಲ ಲಭಿಸಿದ್ದರೆ, ಇನಿಂಗ್ಸ್ ಪೂರ್ತಿ ಆಡಿದಾಗ 83ಕ್ಕೆ ಬದಲಾಗಿ 125 ರನ್ ಗಳಿಸಲು ಸಾಧ್ಯವಿತ್ತು. ನಾಯಕ ಪ್ಲೆಸಿಸ್ (46 ರನ್), ಗ್ಲೆನ್ ಮ್ಯಾಕ್ಸ್ವೆಲ್ (31), ಆಲ್ರೌಂಡರ್ ಕ್ಯಾಮರಾನ್ ಗ್ರೀನ್ (54) ಮತ್ತು ರಜತ್ ಪಾಟೀದಾರ್ (21) ರನ್ಬರ ಎದುರಿಸಿದ್ದಾರೆ. ಟಿ20 ವಿಶ್ವಕಪ್ ವರ್ಷದಲ್ಲಿ ದಿನೇಶ್ ಕಾರ್ತಿಕ್ ಫಿನಿಷರ್ ಪಾತ್ರದಲ್ಲಿ ಮತ್ತೆ ಲಯ ಕಂಡುಕೊಂಡಿರುವುದು ಆರ್ಸಿಬಿಗೆ ಸಮಾಧಾನಕರ ಅಂಶ. ಮಹಿಪಾಲ್ ಲೊಮ್ರೊರ್ ಅಥವಾ ಸುಯಶ್ ಪ್ರಭುದೇಸಾಯಿಗೆ ಈ ಬಾರಿ ಆರಂಭಕ 11ರ ಬಳಗದಲ್ಲೇ ಸ್ಥಾನ ಕಲ್ಪಿಸಿ ಬ್ಯಾಟಿಂಗ್ ಬಲಪಡಿಸಬಹುದಾಗಿದೆ.
ಬೌಲಿಂಗ್ ಸುಧಾರಣೆ ಅಗತ್ಯ
ಕಳೆದ ಹರಾಜಿನಲ್ಲಿ ಆರ್ಸಿಬಿ ಖರೀದಿಸಿದ ಬೌಲರ್ಗಳ ಪಟ್ಟಿಯನ್ನು ನೋಡಿದ ಬಳಿಕ ಅಭಿಮಾನಿಗಳು, ಈ ಬೌಲಿಂಗ್ ವಿಭಾಗವನ್ನು ಇಟ್ಟುಕೊಂಡು ಚಿನ್ನಸ್ವಾಮಿ ಅಂಗಣದಲ್ಲಿ ಗೆಲ್ಲಬೇಕಾದರೆ 300 ಪ್ಲಸ್ ರನ್ ಗಳಿಸಬೇಕಾಗುತ್ತದೆ ಎಂದು ಬೇಸರಿಸಿದ್ದರು. ಟೂರ್ನಿಯಲ್ಲಿ ಆರ್ಸಿಬಿಯ ನೀರಸ ಬೌಲಿಂಗ್ ಗಮನಿಸಿದ ಬಳಿಕ ನಿರಾಸೆ ಇನ್ನಷ್ಟು ಹೆಚ್ಚಿದೆ. ಸ್ಟಾರ್ ಸ್ಪಿನ್ನರ್ ಇಲ್ಲದ ತಂಡದಲ್ಲಿ ವೇಗಿಗಳ ದಾಳಿಯೂ ಸತ್ವಹಿನವೆನಿಸಿದೆ. ಪ್ರಮುಖವಾಗಿ ಅಲ್ಜಾರಿ ಜೋಸೆಫ್, ಮೊಹಮದ್ ಸಿರಾಜ್ ದುಬಾರಿಯಾಗಿದ್ದು, ಲಾಕಿ ಫಗ್ಯುರ್ಸನ್ ಅಥವಾ ರೀಸ್ ಟಾಪ್ಲೆ ಕಣಕ್ಕಿಳಿಸುವ ಅಗತ್ಯವಿದೆ. ಜತೆಗೆ ಕನ್ನಡಿಗ ವೈಶಾಕ್ ವಿಜಯ್ಕುಮಾರ್ ಅವರ ಚಿನ್ನಸ್ವಾಮಿ ಅಂಗಣದ ಅನುಭವವನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಗತ್ಯವಿದೆ. ಪ್ರಮುಖವಾಗಿ ಪವರ್ಪ್ಲೇ ಮತ್ತು ಸ್ಲಾಗ್ ಓವರ್ಗಳಲ್ಲಿ ಆರ್ಸಿಬಿ ಬೌಲಿಂಗ್ ಸುಧಾರಿಸಬೇಕಿದೆ.
ಲಖನೌಗೆ ಕನ್ನಡಿಗರ ಬಲ
ಕರ್ನಾಟಕದ ಇಬ್ಬರು ಆಟಗಾರರು ತಂಡದ ಪ್ರಮುಖ ಸದಸ್ಯರಾಗಿರುವುದು ಲಖನೌ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಫಿಟ್ನೆಸ್ ದೃಷ್ಟಿಯಿಂದ ಕೆಎಲ್ ರಾಹುಲ್ ಮತ್ತೆ ನಾಯಕತ್ವ ತೊರೆದು ಕೇವಲ ಬ್ಯಾಟಿಂಗ್ ಮಾತ್ರ ಮಾಡುವರೇ ಎಂಬುದು ಸ್ಪಷ್ಟವಿಲ್ಲ. ಇನ್ನು ಕಳೆದ ದೇಶೀಯ ಋತುವಿನಲ್ಲಿ ರನ್ಮಳೆ ಹರಿಸಿ ಟೆಸ್ಟ್ ಪದಾರ್ಪಣೆಯನ್ನೂ ಮಾಡಿರುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಮೊದಲ 2 ಪಂದ್ಯಗಳಲ್ಲೂ ಒಂದಂಕಿ ದಾಟಿಲ್ಲ. ಹೀಗಾಗಿ ಈಗ ತವರಿನಲ್ಲೇ ಲಯಕ್ಕೆ ಮರಳುವ ತವಕದಲ್ಲಿದ್ದಾರೆ. ಇನ್ನು ಉಪನಾಯಕ ನಿಕೋಲಸ್ ಪೂರನ್, ಕ್ವಿಂಟನ್ ಡಿಕಾಕ್ ಬ್ಯಾಟಿಂಗ್ ಈಗಾಗಲೆ ಲಖನೌಗೆ ಬಲ ತುಂಬಿದ್ದರೆ, ಬೌಲಿಂಗ್ನಲ್ಲಿ ಕಳೆದ ಪಂದ್ಯದಲ್ಲಿ ಸೆನ್ಸೇಶನ್ ಸೃಷ್ಟಿಸಿದ ಯುವ ವೇಗಿ ಮಯಾಂಕ್ ಯಾದವ್ ಈ ಬಾರಿ ಕೇಂದ್ರಬಿಂದುವಾಗಿರಲಿದ್ದಾರೆ.
ಕಳೆದ ವರ್ಷ ರೋಚಕ ಫೈಟ್
ಕಳೆದ ಆವೃತ್ತಿಯಲ್ಲಿ ಆರ್ಸಿಬಿ-ಲಖನೌ ನಡುವಿನ ಪಂದ್ಯ ಸಾಕಷ್ಟು ಬಿಸಿ ಏರಿಸಿತ್ತು. ಬೆಂಗಳೂರಿನಲ್ಲಿ ಆರ್ಸಿಬಿಯನ್ನು ಸೋಲಿಸಿ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದ ಲಖನೌದ ಆಗಿನ ಮೆಂಟರ್ ಗಂಭೀರ್ಗೆ ಕೊಹ್ಲಿ, ಲಖನೌದಲ್ಲಿ ಗೆದ್ದು ದಿಟ್ಟ ಉತ್ತರ ನೀಡಿದ್ದರು. ಜತೆಗೆ ಕೊಹ್ಲಿ ಮತ್ತು ಆಫ್ಘನ್ ವೇಗಿ ನವೀನ್ ಉಲ್ ಹಕ್ ಜಟಾಪಟಿಯೂ ಗಮನಸೆಳೆದಿತ್ತು. ಆದರೆ ಕಳೆದ ಏಕದಿನ ವಿಶ್ವಕಪ್ ವೇಳೆ ಕೊಹ್ಲಿ-ನವೀನ್ ರಾಜಿಯಾಗಿದ್ದರೆ, ಗಂಭೀರ್ ಈ ಬಾರಿ ಕೆಕೆಆರ್ಗೆ ಹೋಗಿದ್ದಾರೆ. ಹೀಗಾಗಿ ಹಿಂದಿನ ಸೇಡು ಈ ಬಾರಿ ಮುಂದುವರಿಯುವ ಸಾಧ್ಯತೆಗಳಿಲ್ಲ.
ಮುಖಾಮುಖಿ: 4
ಆರ್ಸಿಬಿ: 3
ಲಖನೌ: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ.