ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಲು ಸಜ್ಜಾದ ಆರ್‌ಸಿಬಿ ಮಾಜಿ ಆಟಗಾರ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಅನುಭವಿ ವೇಗಿ ಟಿಮ್ ಸೌಥಿ ಮುಂಬರುವ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ತವರು ಮೈದಾನ ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ನವೆಂಬರ್ 28ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಕೊನೇ ಪಂದ್ಯದ ಬಳಿಕ 18 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬದುಕಿಗೆ ವಿದಾಯ ಹೇಳಲಿರುವ ಸೌಥಿ, ಮುಂದಿನ ಜೂನ್‌ನಲ್ಲಿ ನಿಗದಿಯಾಗಿರುವ ಐಸಿಸಿ ವಿಶ್ವ ಟೆಸ್ಟ್ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಫೈನಲ್‌ಗೆ ಕಿವೀಸ್ ಅರ್ಹತೆ ಪಡೆದರೆ ತಂಡದ ಆಯ್ಕೆಗೆ ಲಭ್ಯ ಎಂದು ತಿಳಿಸಿದ್ದಾರೆ.

ನ್ಯೂಜಿಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ 2ನೇ ಬೌಲರ್ ಎನಿಸಿರುವ 35 ವರ್ಷದ ಸೌಥಿ, ಇತ್ತೀಚೆಗೆ ಭಾರತದ ವಿರುದ್ಧದ ಐತಿಹಾಸಿಕ ಸರಣಿ ಗೆಲುವಿಗೂ ಮುನ್ನ ಟೆಸ್ಟ್ ನಾಯಕತ್ವವನ್ನು ಟಾಮ್ ಲಾಥಮ್‌ಗೆ ಬಿಟ್ಟುಕೊಟ್ಟರು. ಕಿವೀಸ್ ಪರ 100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನಾಡಿರುವ ಆರು ನ್ಯೂಜಿಲೆಂಡ್ ಆಟಗಾರರಲ್ಲಿ ಒಬ್ಬರೆನಿಸಿರುವ ಸೌಥಿ, 161 ಏಕದಿನ 126 ಟಿ20 ಪಂದ್ಯಗಳನ್ನು ಆಡಿದ್ದಾರೆ. 2008ರಲ್ಲಿ 19ನೇ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸೌಥಿ, ಮೊದಲ ಪಂದ್ಯದಲ್ಲಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಟೆಸ್ಟ್‌ನಲ್ಲಿ 300, ಏಕದಿನದಲ್ಲಿ 200 ಮತ್ತು ಟಿ20ನಲ್ಲಿ 100 ವಿಕೆಟ್ ಪಡೆದಿರುವ ಏಕೈಕ ಆಟಗಾರ ಎನಿಸಿರುವ ಸೌಥಿ, ‘ಇದು ಅದ್ಭುತ ಜರ್ನಿಯಾಗಿದೆ, ನಾನು ಯಾವುದನ್ನು ಬದಲಾಯಿಸಲು ಬಯಸುವುದಿಲ್ಲ ಎಂದು ವೃತ್ತಿಜೀವನವನ್ನು ವರ್ಣಿಸಿದ್ದಾರೆ.