ಕ್ರೀಡೆ

ಅದು 25 ಲಕ್ಷ ರೂ.! ಪಿಎಂ ಕೊಟ್ಟಿದ್ದ ಚೆಕ್​ ಬೌನ್ಸ್: ತಮ್ಮದೇ ಆಟಗಾರರಿಗೆ ಹಣ ನೀಡಲು ಪಾಕ್​ಗಿರಲಿಲ್ಲ ಯೋಗ್ಯತೆ | Pakistan

Pakistan: ಇತ್ತೀಚೆಗಷ್ಟೇ ದುಬೈನಲ್ಲಿ ನಡೆದ ಏಷ್ಯಾಕಪ್​ ಟಿ20 ಟೂರ್ನಿಯನ್ನು ಗೆದ್ದ ಟೀಮ್ ಇಂಡಿಯಾ, ಮೂರನೇ ಬಾರಿಗೆ ಪಾಕಿಸ್ತಾನವನ್ನು ಮಣಿಸುವ ಮೂಲಕ ಭರ್ಜರಿ ಗೆಲುವನ್ನು ದಾಖಲಿಸಿತು. ವೈರಿ ರಾಷ್ಟ್ರದೊಂದಿಗೆ ಪಂದ್ಯವನ್ನಾಡಿದ ಭಾರತಕ್ಕೆ ಇಲ್ಲಿಯವರೆಗೂ ಏಷ್ಯಾಕಪ್​ ಟ್ರೋಫಿ ಮತ್ತು ಮೆಡಲ್​ಗಳು ದೊರಕಿಲ್ಲ. ಅದಕ್ಕೆ ಕಾರಣ, ಪಾಕಿಸ್ತಾನದ ನರಿಬುದ್ಧಿ.

ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಫೈನಲ್ ಗೆದ್ದ ಭಾರತ ತಂಡಕ್ಕೆ ಟ್ರೋಫಿಯನ್ನು ಕೊಡದೆ, ಮೈದಾನದಿಂದ ಕಾಲ್ಕಿತ್ತ ದೃಶ್ಯ ಸದ್ಯ ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಮೊಹ್ಸಿನ್​ ನಡೆಗೆ ವ್ಯಾಪಕ ಖಂಡನೆ, ವಿರೋಧ, ಟೀಕೆ, ವ್ಯಂಗ್ಯಗಳು ವ್ಯಕ್ತವಾಗಿವೆ. ಇಷ್ಟಾದರೂ ಸೂರ್ಯಕುಮಾರ್ ಯಾದವ್ ಪಡೆಗೆ ಟ್ರೋಫಿ ಮತ್ತು ಮೆಡಲ್​ಗಳನ್ನು ಹಿಂತಿರುಗಿಸಲು ಎಸಿಸಿ ಮುಖ್ಯಸ್ಥ ಇಚ್ಛಿಸುತ್ತಿಲ್ಲ. ಈ ಕುರಿತಂತೆ ಈಗಾಗಲೇ ಬಿಸಿಸಿಐ ಐಸಿಸಿಗೆ ದೂರು ಸಲ್ಲಿಸಿದೆ. ಇದೆಲ್ಲದರ ನಡುವೆ ಪಾಕ್​ ತನ್ನದೇ ದೇಶದ ಆಟಗಾರರಿಗೆ ಹಣ ಕೊಡಲು ಹಿಂದೇಟು ಹಾಕಿದ ಘಟನೆಯನ್ನು ಮಾಜಿ ಕ್ರಿಕೆಟಿಗ ಸೈಯದ್​ ಅಜ್ಮಲ್​ ನೆನಪಿಸಿದ್ದಾರೆ.

2009ರಲ್ಲಿ ನಡೆದ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಪಾಕ್​, ಯೂನಿಸ್​ ಖಾನ್​ ನಾಯಕತ್ವದಲ್ಲಿ ಪಂದ್ಯವನ್ನು ಗೆದ್ದಿತು. ಚಾಂಪಿಯನ್‌ ವಿಜೇತ ತಂಡಕ್ಕೆ ಅಂದಿನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರಿಂದ ತಲಾ 25 ಲಕ್ಷ ರೂ.ಗಳ ಚೆಕ್ ಬಂದಿತು. ಆದರೆ, ನಮಗ್ಯಾರಿಗು (ಆಟಗಾರರು) ಹಣ ಸಿಗಲಿಲ್ಲ. ಕಾರಣ, ಅವರು ಕೊಟ್ಟ ಚೆಕ್ ಬೌನ್ಸ್ ಆಗಿತ್ತು ಎಂದಿದ್ದಾರೆ.

ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಅಸಲಿ ವಿಚಾರ ಬಿಚ್ಚಿಟ್ಟಿರುವ ಅಜ್ಮಲ್, ಆ ಟಿ20 ಟೂರ್ನಿ ಮುಗಿಸಿದ ನಮಗೆ ಶ್ರೀಲಂಕಾ ಪ್ರವಾಸವಿತ್ತು. ಹೀಗಾಗಿ ಹಣವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗಲಿಲ್ಲ. ಖುದ್ದಾಗಿ ಪ್ರಧಾನಿ ಅವರೇ ಎಲ್ಲ ಆಟಗಾರರನ್ನು ಕರೆದು, ತಲಾ 25 ಲಕ್ಷ ರೂ. ಚೆಕ್​ ಅನ್ನು ಹಸ್ತಾಂತರಿಸಿದರು. ಆಗ ನಮಗೂ ತುಂಬ ಖುಷಿಯಾಯಿತು. ದೊಡ್ಡ ಮೊತ್ತದ ಹಣ ಸಿಕ್ಕಿತು ಎಂದು. ಆದರೆ, ಅವರು ಕೊಟ್ಟ ಚೆಕ್​ ಬೌನ್ಸ್ ಆಗಿದೆ ಎಂಬ ಸಂಗತಿ ತಿಳಿದು ತೀರ ಬೇಸರವಾಯಿತು ಎಂದು ಹೇಳಿದ್ದಾರೆ.

ಸರ್ಕಾರ ನೀಡಿದ ಚೆಕ್​ ಕೂಡ ಬೌನ್ಸ್ ಆಯಿತು ಎಂಬ ವಿಷಯ ನಿಜಕ್ಕೂ ಭಾರೀ ಆಶ್ಚರ್ಯ ಮೂಡಿಸಿತು. ಈ ಬಗ್ಗೆ ಪಿಸಿಬಿ ಮುಖ್ಯಸ್ಥರು ಮಾತುಕತೆ ಮಾಡುತ್ತಾರೆ ಎಂದು ಆರಂಭದಲ್ಲಿ ಹೇಳಲಾಯಿತು. ಆದರೆ, ಇದರಿಂದ ಕೈತೊಳೆದುಕೊಂಡ ಅವರು, ಇದು ಸರ್ಕಾರ ನಿಮಗೆ ಕೊಟ್ಟ ಮಾತು. ಇದಕ್ಕೆ ನಾವು ಜವಾಬ್ದಾರಿಯಲ್ಲ ಎಂದರು. ಕೊನೆಗೆ ನಮ್ಮ ಸಿಕ್ಕಿದ್ದು ಕೇವಲ ಐಸಿಸಿ ನೀಡಿದ ಹಣ ಮಾತ್ರ ಎಂದು ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).