ನವದೆಹಲಿ: ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಈಗಾಗಲೇ ತಂಡಗಳು ತಯಾರಿ ಆರಂಭಿಸಿದ್ದು, 15 ಸದಸ್ಯರ ತಂಡವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಫೈನಲ್ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳು ಹೈಬ್ರಿಡ್ ಮಾದರಿಯಲ್ಲಿ (Hybrid Model) ನಡೆಯಲಿದ್ದು, ಇದರ ಲಾಭವನ್ನು ಭಾರತ ಹೆಚ್ಚು ಪಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಆರೋಪಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ (Champions Trophy) ಆರಂಭವಾಗುವುದಕ್ಕೂ ವರ್ಷಕ್ಕೂ ಮುನ್ನವೇ ಟೂರ್ನಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಿತ್ತಾಟದಿಂದಾಗಿ ಹೆಚ್ಚು ಸದ್ದು ಮಾಡುತ್ತಿದ್ದು, ಅಂತಿಮವಾಗಿ ಭಾರತ ಮೇಲುಗೈ ಸಾಧಿಸಿತ್ತು. ಭದ್ರತೆಯ ಕಾರಣ ನೀಡಿ ಭಾರತ ಪಾಕ್ಗೆ ತೆರಳುವುದಿಲ್ಲ ಎಂದು ಹೇಳಿದ್ದು, ಭಾರತ ತಂಡ ಪಾಕ್ ನೆಲದಲ್ಲಿ ಆಡಿದತೆ ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಯಾಗುತ್ತದೆ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಹೇಳಿತ್ತು. ಈ ಸಂಬಂಧ ಮಾಜಿ ಹಾಗೂ ಹಾಲಿ ಆಟಗಾರರು ಸರಣಿ ಹೇಳಿಕೆಗಳನ್ನು ನೀಡಿದ್ದರು. ಇದೀಗ ಟೂರ್ನಿಗೆ ಸಂಬಂಧಿಸಿದಂತೆ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಲೀಮ್ ಅಲ್ತಾಫ್ ಹೇಳಿಕೆ ನೀಡಿದ್ದು, ಭಾರತವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅಲ್ತಾಫ್, ನನ್ನ ಪ್ರಕಾರ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಭಾರತಕ್ಕೆ ಹೆಚ್ಚು ಲಾಭವಾಗಲಿದ್ದು, ಇತರೆ ತಂಡಗಳಿಗೆ ಇದು ಹಿನ್ನಡೆಯಾಗಿ ಪರಿಣಮಿಸಲಿದೆ. ಏಕೆಂದರೆ ಭಾರತ ತಂಡಕ್ಕೆ ತಾನು ಸೆಮಿಫಿನಾಲೆ ಹಾಗೂ ಫೈನಲ್ ಪಂದ್ಯವನ್ನು ಎಲ್ಲಿ ಆಡುತ್ತದೆ ಎಂದು ತಿಳಿದಿದ್ದು, ಇತರೆ ತಂಡಗಳಿಗೆ ಲೀಗ್ ಹಂತದ ಪಂದ್ಯಗಳು ಮುಗಿದ ನಂತರ ತಿಳಿಯಲಿದೆ. ಹೈಬ್ರಿಡ್ ಮಾದರಿ ಆಡುವ ಮೂಲಕ ಭಾರತಕ್ಕೆ ಹೆಚ್ಚು ಲಾಭವಾಗಲಿದೆ.
ಭಾರತ ತಂಡ ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶದ ವಿರುದ್ಧ ತನ್ನ ಪಂದ್ಯಗಳನ್ನು ಆಡಲಿದ್ದು, ಈ ಮೂರು ತಂಡಗಳು ದುಬೈಗೆ ಪ್ರಯಾಣಿಸಿ ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳಬೇಕಿದೆ. ಆದರೆ, ಭಾರತ ದುಬೈನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಲಿದ್ದು, ಪ್ರಯಾಣದ ಆಯಾಸವೂ ಟೀಮ್ ಇಂಡಿಯಾಗೆ ಇರುವುದಿಲ್ಲ. ಹೀಗಾಗಿ ಭಾರತ ಹೈಬ್ರಿಡ್ ಮಾದರಿಯಲ್ಲಿ ಆಡುವ ಮೂಲಕ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಲೀಮ್ ಅಲ್ತಾಫ್ ಹೇಳಿದ್ದಾರೆ.