ಕ್ರೀಡೆ

ದಿನೇಶ್​ ಕಾರ್ತೀಕ್​ರನ್ನು ಟೀಕಿಸಿದ ಗೌತಮ್​ ಗಂಭೀರ್​; ತಮ್ಮನ್ನು ಹೊಗಳಿಕೊಂಡರು...!

ಐಪಿಎಲ್​ 2020ರಲ್ಲಿ ಕೋಲ್ಕತ್ತ ನೈಟ್​ ರೈಡರ್ಸ್​ ತಂಡ ಹಿಂದೆ ಬಿದ್ದಿದೆ. ಗುರುವಾರ ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ವಿರುದ್ಧ ಸೋಲುಂಡ ಬಳಿಕ ಅದರ ಪ್ಲೇ ಆಫ್​ ಹಾದಿಯೂ ಕಠಿಣಗೊಂಡಿದೆ.

ಹೀಗಿರುವಾಗ ಕೆಕೆಆರ್​ ಮಾಜಿ ಕ್ಯಾಪ್ಟನ್​ ಗೌತಮ್​ ಗಂಭೀರ್, ತಂಡದ ವೈಫಲ್ಯಕ್ಕೆ ಕಾರಣ ಮಧ್ಯಂತರದಲ್ಲಿ ನಾಯಕತ್ವ ಬದಲಾವಣೆ ಮಾಡಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್​ ಶುರುವಾದ ಬಳಿಕ ಮಧ್ಯದಲ್ಲಿ ನಾಯಕತ್ವ ಸ್ಥಾನದಿಂದ ದಿನೇಶ್​ ಕಾರ್ತೀಕ್​ ಅವರನ್ನು ಕೆಳಗಿಳಿಸಿ, ಇಯಾನ್ ಮೋರ್ಗಾನ್ ಅವರಿಗೆ ಜವಾಬ್ದಾರಿ ವಹಿಸಿದ ಮ್ಯಾನೇಜ್​ಮೆಂಟ್​ನ್ನು ಹಾಗೂ ಸುಲಭವಾಗಿ ನಾಯಕತ್ವ ಬಿಟ್ಟುಕೊಟ್ಟ ದಿನೇಶ್​ ಕಾರ್ತೀಕ್​ ಅವರನ್ನು ಗಂಭೀರ್​ ಟೀಕಿಸಿದ್ದಾರೆ.

ನೀವು ನಾಯಕತ್ವವನ್ನು ಬಿಟ್ಟಿಕೊಟ್ಟಿದ್ದು ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ. ನಿಮ್ಮ ಬ್ಯಾಟಿಂಗ್​ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂಬ ಕಾರಣಕ್ಕೆ ಕ್ಯಾಪ್ಟನ್ಸಿ ಬಿಟ್ಟುಕೊಟ್ಟಿರಿ. ಆದರೆ ನಿಮ್ಮ ಈ ಯೋಜನೆ ಕೆಲಸ ಮಾಡಲಿಲ್ಲ. ನಿಮಗೆ ನೆನಪಿರಬಹುದು..2014ರಲ್ಲಿ ನಾನು ಅದೆಷ್ಟು ಕೆಟ್ಟ ಸಂದರ್ಧ ಎದುರಿಸಿದ್ದೆ ಎಂಬುದು. ಆ ಪಂದ್ಯಾವಳಿಯಲ್ಲಿ ನಾನು ಸತತ ಮೂರು ಬಾರಿ ಶೂನ್ಯಕ್ಕೆ ಹೊರನಡೆದೆ. ಆದರೆ ನಂತರ ನನಗೆ ಮತ್ತೆ ಫಾರ್ಮ್​ಗೆ ಮರಳಲು ಸಹಾಯ ಮಾಡಿದ್ದು ನಾಯಕತ್ವ. ಹಾಗೇ ನೀವು ಜವಾಬ್ದಾರಿಯನ್ನು ಬಿಟ್ಟುಕೊಡುವ ಅಗತ್ಯ ಇರಲಿಲ್ಲ. ಅದು ಒಳ್ಳೆಯದಲ್ಲ ಎಂದು ಗಂಭೀರ್ ಸಂದರ್ಶನವೊಂದರಲ್ಲಿ ಮಾತನಾಡುತ್ತ ದಿನೇಶ್ ಕಾರ್ತೀಕ್​ಗೆ ಹೇಳಿದ್ದಾರೆ. ಇದನ್ನೂ ಓದಿ: 28ವರ್ಷಗಳ ಬಳಿಕ ಅಯೋಧ್ಯಾ ಶ್ರೀರಾಮನ ಸನ್ನಿಧಿಯಲ್ಲಿ ದೀಪಾವಳಿ; ಸಿಎಂ ಯೋಗಿಯಿಂದ ಆರತಿ

ತಮ್ಮನ್ನೇ ಉದಾಹರಣೆ ಕೊಟ್ಟುಕೊಂಡು ಕಾರ್ತೀಕ್​ಗೆ ಸಲಹೆ ನೀಡಿದ ಗಂಭೀರ್​, ಅಂದು ನನಗೆ ಬ್ಯಾಟಿಂಗ್​ನಲ್ಲಿ ಫಾರ್ಮ್ ಇರಲಿಲ್ಲ. ಆಗ ನಾನು ನನ್ನ ನಾಯಕತ್ವದಲ್ಲಿ ತಂಡವನ್ನು ಹೇಗೆ ಬಲಿಷ್ಠಪಡಿಸಬಹುದು..ಏನೆಲ್ಲ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಗಮನಹರಿಸಿದೆ. ಆದರೆ ನೀವು ನಿಮ್ಮ ನಾಯಕತ್ವವನ್ನೇ ಬಿಟ್ಟು, ಬ್ಯಾಟಿಂಗ್​ ಬಗ್ಗೆ ಜಾಸ್ತಿ ಯೋಚಿಸುತ್ತಿದ್ದೀರಿ ಎಂದು ಹೇಳಿದ್ದಾರೆ.

ಹಾಗೇ ದಿನೇಶ್​ ಕಾರ್ತೀಕ್​ ಹೇಳಿದ ಮಾತ್ರಕ್ಕೆ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ತಂಡದಲ್ಲಿ ಬದಲಾವಣೆ ಮಾಡಿದ ಮ್ಯಾನೇಜ್​ಮೆಂಟ್​ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)