ಕ್ರೀಡೆ

ಮದುವೆಯ ಬಳಿಕ ಎಲ್ಲರೂ ಕಾಣೆಯಾಗುತ್ತಾರೆ ಎಂದಿದ್ದೇಕೆ ಶಿಖರ್​ ಧವನ್​?

lakshmihegde

ನವದೆಹಲಿ: ಚೆನ್ನೈ ಸೂಪರ್​ಕಿಂಗ್ಸ್​ ತಂಡದಲ್ಲಿ ತಮ್ಮ ಸಹ-ಆಟಗಾರರಾಗಿರುವ ಸುರೇಶ್​ ರೈನಾ 'ಕಾಣೆಯಾಗಿದ್ದಾರೆ' ಎಂಬ ರೀತಿಯ ಜಾಹೀರಾತಿನ ಪೋಸ್ಟರ್​ ಅನ್ನು ಹಿರಿಯ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಈ ಮೂಲಕ ಟೀಮ್​ ಇಂಡಿಯಾದ ಮಾಜಿ ಸಹ-ಆಟಗಾರನೂ ಆಗಿರುವ ರೈನಾ ಅವರ ಕಾಲೆಳೆದಿದ್ದರು. ಇದಕ್ಕೆ ಪ್ರತಿಯಾಗಿ ಈಗ ಟೀಮ್​ ಇಂಡಿಯಾದ ಎಡಗೈ ಆರಂಭಿಕ ಶಿಖರ್​ ಧವನ್​, ಹರ್ಭಜನ್​ ಸಿಂಗ್​ಗೆ ತಮಾಷೆಯಾಗಿ ಉತ್ತರ ನೀಡಿದ್ದಾರೆ.

'ಮಾರ್ಚ್​ 20ರಿಂದ ಮಿಸ್​ ಆಗಿದ್ದಾರೆ' ಎಂಬ ತಲೆಬರಹದ ಪೋಸ್ಟರ್​ನೊಂದಿಗೆ ಹರ್ಭಜನ್​ ಸಿಂಗ್​, 'ಬಹುಶಃ ಈಗ ಅಡುಗೆ ಕಲಿತಿರಬಹುದು. ಆದರೆ ಖಂಡಿತವಾಗಿಯೂ ಟೆಕ್ಟ್​​ ಮಾಡುವುದನ್ನು ಮರೆತಿದ್ದಾರೆ. ಇವರು ಪತ್ತೆಯಾದಲ್ಲಿ ಮಾಹಿತಿಯನ್ನು ಪರ್ಕ್​ಮಿಸ್ಸಿಂಗ್​ಪೋಸ್ಟರ್​ ಹ್ಯಾಷ್​ಟ್ಯಾಗ್​ನೊಂದಿಗೆ ಹಂಚಿಕೊಳ್ಳಿ' ಎಂದು ಕೆಳಗಡೆ ಬರೆದಿದ್ದರು. ಜತೆಗೆ, 'ನನ್ನ ಉತ್ತಮ ಗೆಳೆಯ ಸುರೇಶ್​ ರೈನಾ ಬಗ್ಗೆ ಕಳೆದ ಕೆಲಸಮಯದಿಂದ ನನಗೆ ಏನೂ ತಿಳಿದುಬಂದಿಲ್ಲ. ಬಹುಶಃ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ ಪ್ರವೇಶಿಸಿದ 15 ವರ್ಷದ ಸಂಭ್ರಮದಲ್ಲಿ ಬಿಜಿಯಾಗಿರಬಹುದು. ಅವರ ಬಗ್ಗೆ ನಿಮಗೆ ಏನಾದರು ತಿಳಿದರೆ, ನನಗೂ ತಿಳಿಸಿ' ಎಂದು ಬರೆದುಕೊಂಡಿದ್ದರು.

ಹರ್ಭಜನ್​ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಶಿಖರ್​ ಧವನ್​, 'ವಿವಾಹದ ನಂತರ ಎಲ್ಲರೂ ಕಾಣೆಯಾಗಿಬಿಡುತ್ತಾರೆ. ಪಾಜಿ ಇದನ್ನು ಅರ್ಥಮಾಡಿಕೊಳ್ಳಿ' ಎಂದು ಬರೆದಿದ್ದಾರೆ.