ನವದೆಹಲಿ: ಹಲವು ಬಾರಿ ಟ್ರೋಫಿ ಗೆಲ್ಲುವ ಮೂಲಕ ದಾಖಲೆ ಬರೆದಿರುವ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ಕಳೆದ ಐಪಿಎಲ್ ಸೀಸನ್ನಲ್ಲಿ ಪ್ಲೇಆಫ್ ಹಂತಕ್ಕೇರಲು ವಿಫಲವಾಯಿತು. ಘಟಾನುಘಟಿ ಆಟಗಾರರಿದ್ದರೂ ಹೀನಾಯವಾಗಿ ಸೋಲುವ ಮೂಲಕ ಭಾರಿ ಅವಮಾನ ಎದುರಿಸಿತು. ಈಗ ಮತ್ತೆ ಉತ್ತಮ ತಂಡ ರಚಿಸುವ ಭರವಸೆ ಹೊಂದಿರುವ ಮುಂಬೈ ತಂಡ, 2023ರಲ್ಲಿ ನಡೆಯಲಿರುವ ಐಪಿಎಲ್ ಹರಾಜಿಗೂ ಮುನ್ನ 13 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.
ರೋಹಿತ್ ಶರ್ಮ ನೇತೃತ್ವದ ತಂಡವು ಐಪಿಎಲ್-2022 ಸೀಸನ್ನಲ್ಲಿ ಉತ್ತಮ ಆರಂಭ ಕಂಡರೂ ಅಂತಿಮವಾಗಿ ಪಂದ್ಯಾವಳಿಯಲ್ಲಿ ಕೊನೆಯ ಸ್ಥಾನವನ್ನು ಗಳಿಸಿತು. ಸ್ಪರ್ಧೆಯ ಲೀಗ್ ಹಂತದಲ್ಲಿ 10 ಸೋಲುಗಳನ್ನು ಅನುಭವಿಸಿದ ಮುಂಬೈ, ಕೇವಲ ನಾಲ್ಕು ಪಂದ್ಯದಲ್ಲಿ ಗೆಲುವು ದಾಖಲಿಸಿತು.
ಇದೀಗ ಮುಂಬರುವ ಟೂರ್ನಿಗೆ ಸಿದ್ಧತೆ ನಡೆಸುತ್ತಿರುವ ಮುಂಬೈ ತಂಡ, ಮುಂದಿನ ಐಪಿಎಲ್ ಹರಾಜಿಗೆ ಸಜ್ಜಾಗುತ್ತಿದೆ. ಈ ಬಾರಿ ಬೌಲಿಂಗ್ ದಾಳಿಯನ್ನು ಪರಿಷ್ಕರಿಸುವ ನಿರೀಕ್ಷೆಯನ್ನು ಹೊಂದಿದೆ. ಸ್ಟಾರ್ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ವೇಗದ ಬೌಲರ್ ಜೋಫ್ರಾ ಆರ್ಚರ್ ಪ್ರಮುಖ ಬೌಲರ್ಗಳಾಗಿದ್ದು, ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಪಿನ್ ಕೊರತೆ ಇದೆ. ಹೀಗಾಗಿ ಆ ಸ್ಥಾನ ಯಾವ ಆಟಗಾರನಿಗೆ ಸಿಗುತ್ತದೆ ಎಂಬುದು ಬಹಳ ಕುತೂಹಲಕಾರಿಯಾಗಿದೆ.
ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಪ್ರಕಾರ ಮುಂಬೈ ಇಂಡಿಯನ್ಸ್ ತಂಡವು 2023ರಲ್ಲಿ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಸ್ಪಿನ್ ಮಾತ್ರಿಕರಾದ ಆ್ಯಡಂ ಝಂಪಾ ಮತ್ತು ಆದಿಲ್ ರಶೀದ್ ಅವರನ್ನು ಟಾರ್ಗೆಟ್ ಮಾಡಬೇಕು ಎಂದಿದ್ದಾರೆ. ಪ್ರತಿಯೊಂದು ಐಪಿಎಲ್ ತಂಡಕ್ಕೂ ರಶೀದ್ ಖಾನ್ ರೀತಿಯ ಆಟಗಾರ ಬೇಕಿದೆ. ಪ್ರತಿಯೊಬ್ಬರು ರಶೀದ್ ಖಾನ್ ಅಥವಾ ಸುನಿಲ್ ನರೈನ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಆದ್ದರಿಂದ ಬಹುಶಃ ಝಂಪಾ ಅಥವಾ ಆದಿಲ್ ರಶೀದ್ ಅವರಂತಹ ಲೆಗ್-ಸ್ಪಿನ್ನರ್ ಅನ್ನು ಹುಡುಕಲು ಯಾರಾದರೂ ಬರಬಹುದು. ಏಕೆಂದರೆ ಕಳೆದ ಸೀಸನ್ನಲ್ಲಿ ಇಬ್ಬರ ಪ್ರದರ್ಶನಗಳು ಹೊರತಾಗಿಯೂ ಇತರ ಎಲ್ಲಾ ಅಂಶಗಳು ಸರಿಯಾಗಿವೆ ಎಂದು ತಮ್ಮ ಅಭಿಪ್ರಾಯವನ್ನು ಮಂಜ್ರೇಕರ್ ಅವರು ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ವ್ಯಕ್ತಪಡಿಸಿದರು.
ಮುಂಬೈ ಇಂಡಿಯನ್ಸ್ ತಂಡ ರಾಹುಲ್ ಚಾಹರ್ ಅವರನ್ನು ಉಳಿಸಿಕೊಳ್ಳಬೇಕಿತ್ತು ಎಂದು ಇದೇ ವೇಳೆ ಮಂಜ್ರೇಕರ್ ಹೇಳಿದರು. ಮಾಜಿ ಮುಂಬೈ ಇಂಡಿಯನ್ಸ್ ಸ್ಪಿನ್ನರ್ ಆಗಿರುವ ಚಾಹರ್ರನ್ನು ಪಂಜಾಬ್ ತಂಡ ಕಳೆದ ಸೀಸನ್ನಲ್ಲಿ 5.25 ಕೋಟಿ ರೂ.ಗೆ ಬಿಕರಿ ಮಾಡಿತು. ಹೌದು, ಚಾಹರ್ ರಿಸ್ಟ್ ಸ್ಪಿನ್ನರ್. ಪಂಜಾಬ್ ಅವರು ಎಂ. ಅಶ್ವಿನ್ ಅವರನ್ನು ಕೈಬಿಟ್ಟಿದ್ದಾರೆ. ಅವರು ಲೆಗ್ ಸ್ಪಿನ್ನರ್ ಇತಿಹಾಸವನ್ನು ಹೊಂದಿದ್ದು, ಮಾರ್ಕಂಡೆ ಸಹ ಇದ್ದರು. ಚಾಹರ್ ಅವರನ್ನು ಮುಂಬೈ ಬಿಡಬಾರದಿತ್ತು. ಆದರೆ, ಕೈಬಿಟ್ಟಿದ್ದಾರೆ. ಮತ್ತೊಬ್ಬ ರಿಸ್ಟ್ ಸ್ಪಿನ್ನರ್ ತಬ್ರೇಜ್ ಶಮ್ಸಿ ಅವರ ಮೇಲೂ ಮುಂಬೈ ಇಂಡಿಯನ್ಸ್ ಆಸಕ್ತಿ ತೋರಬಹುದು ಎಂದು ಮಂಜ್ರೇಕರ್ ಹೇಳಿದರು. (ಏಜೆನ್ಸೀಸ್)