ಕ್ರೀಡೆ

ಯುರೋಕಪ್​ ಫುಟ್​ಬಾಲ್​ ಟೂರ್ನಿ; ಬೆಲ್ಜಿಯಂ, ಫಿನ್​ಲ್ಯಾಂಡ್​ ತಂಡಗಳಿಗೆ ಜಯ

ಕೋಪೆನ್​ಹೆಗನ್​(ಡೆನ್ಮಾರ್ಕ್​): ಸ್ಟಾರ್​ ಆಟಗಾರ ಕ್ರಿಶ್ಚಿಯನ್​ ಎರಿಕ್​ಸನ್​ ಮೈದಾನದಲ್ಲೇ ಕುಸಿದು ಬಿದ್ದ ಆಘಾತದ ನಡುವೆಯೂ ಪ್ರಬಲ ಪೈಪೋಟಿ ತೋರಿದ ಡೆನ್ಮಾರ್ಕ್​ ತಂಡ ಯುರೋ ಕಪ್​ ಫುಟ್​ಬಾಲ್​ ಟೂರ್ನಿಯಲ್ಲಿ ನಿರಾಸೆ ಆರಂಭ ಕಂಡಿತು. ಪಾರ್ಕೆನ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್​ ತಂಡ 0-1 ಗೋಲುಗಳಿಂದ ಫಿನ್​ಲ್ಯಾಂಡ್​ ತಂಡಕ್ಕೆ ಶರಣಾಯಿತು. ಕ್ರಿಶ್ಚಿಯನ್​ ಎರಿಕ್​ಸನ್​ ಮೈದಾನದಲ್ಲೇ ಕುಸಿದು ಬಿದ್ದ ಪರಿಣಾಮ ಪಂದ್ಯ 90 ನಿಮಿಷಗಳ ಕಾಲ ಸ್ಥಗಿತಗೊಂಡಿತು. ಮೊದಲಾರ್ಧದ ಕಡೇ ಹಂತದಲ್ಲಿ ಎರಿಕ್​ಸನ್​ ಮೈದಾನದಲ್ಲೇ ಕುಸಿದರು. ಇದರಿಂದ ಕೆಲಕಾಲ ಮೈದಾನದಲ್ಲಿ ಆತಂಕದ ವಾತವರಣ ಸೃಷ್ಟಿಯಾಯಿತು. ಜೋಯೆಲ್​ ಪೊಜಾನ್​ಪಾಲೊ 59ನೇ ನಿಮಿಷದಲ್ಲಿ ಫಿನ್​ಲ್ಯಾಂಡ್​ ಪರ ಏಕೈಕ ಗೋಲು ದಾಖಲಿಸಿದರೆ, ಗೋಲುಕೀಪರ್​ ಲುಕಸ್​ ಹಾರ್ಡೆಕ್ಲಿ ಪೆನಾಲ್ಟಿಯೊಂದನ್ನು ರಕ್ಷಿಸುವ ಮೂಲಕ ಜಯ ಫಿನ್​ಲ್ಯಾಂಡ್​ ತಂಡದಿಂದ ಕೈಜಾರದಂತೆ ನೋಡಿಕೊಂಡರು.

ಬೆಲ್ಜಿಯಂಗೆ ಸುಲಭ ತುತ್ತಾದ ರಷ್ಯಾ

ಸೇಂಟ್​ ಪೀಟರ್ಸ್​ರ್ಬಗ್​ (ರಷ್ಯಾ): ಸ್ಟಾರ್​ ಆಟಗಾರ ರೊಮೆಲು ಲುಕಾಕು (10, 88ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಬೆಲ್ಜಿಯಂ ತಂಡ ಬಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಶುಭಾರಂಭ ಕಂಡಿತು. ಕ್ರೆಸ್ಟೋವ್​ಸ್ಕಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಲ್ಜಿಯಂ ತಂಡ 3-0 ಗೋಲುಗಳಿಂದ ರಷ್ಯಾ ತಂಡವನ್ನು ಮಣಿಸಿತು. ಪಂದ್ಯದ 10ನೇ ನಿಮಿಷದಲ್ಲೇ ಬಾಟಮ್​ ಕಾರ್ನರ್​ ಮೂಲಕ ಗೋಲುಗಳಿಸಿ ತಂಡಕ್ಕೆ ಆರಂಭದಲ್ಲೇ ಮುನ್ನಡೆ ತಂದುಕೊಟ್ಟರು. ಅತ್ತ ಲುಕಾಕು ಆತ್ಮೀಯ ಸ್ನೇಹಿತ ಹಾಗೂ ಇಟಲಿಯ ಇಂಟರ್​ ಮಿಲನ್​ ಕ್ಲಬ್​ ತಂಡದ ಜತೆಗಾರ ಕ್ರಿಶ್ಚಿಯನ್​ ಎರಿಕ್​ಸನ್​ ಮೈದಾನದಲ್ಲೇ ಕುಸಿದು ಬಿದ್ದ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ಲುಕಾಕು ಮೈದಾನದಲ್ಲಿ ತಮ್ಮ ಎಂದಿನ ಕಾಲ್ಚಳಕ ತೋರಿದರು. ಸುಮಾರು 26 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ಆಟಗಾರರ ಭರ್ಜರಿ ನಿರ್ವಹಣೆ ತೋರಿದರು.