ಲಂಡನ್: ಕರೊನಾ ವೈರಸ್ನಿಂದಾಗಿ ಜಾಗತಿಕ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇದರಿಂದಾಗಿ ಕ್ರೀಡಾಲೋಕ ಸಾಕಷ್ಟು ನಷ್ಟವನ್ನೂ ಅನುಭವಿಸುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕರೊನಾ ಭೀತಿಯಿಂದ ಮುಕ್ತರಾಗಿ ಮತ್ತೆ ಪಂದ್ಯಗಳು ಆರಂಭಗೊಂಡಾಗ, ನಷ್ಟವನ್ನು ನೀಗಿಸಿಕೊಳ್ಳಲು ಇಂಗ್ಲೆಂಡ್ನಲ್ಲಿ ಹೊಸ ಆಲೋಚನೆಯೊಂದು ಮೂಡಿದೆ. ಏಕಕಾಲದಲ್ಲಿ ಒಂದೇ ದೇಶದ ಎರಡು ತಂಡಗಳನ್ನು ಕಣಕ್ಕಿಳಿಸುವ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಗಂಭೀರವಾಗಿ ಚಿಂತನೆ ನಡೆಸಿದೆ. ಇಂಗ್ಲೆಂಡ್ನ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಇವೊಯಿನ್ ಮಾರ್ಗನ್ರಿಂದ ಇದಕ್ಕೆ ಬೆಂಬಲವೂ ವ್ಯಕ್ತವಾಗಿದೆ. ಆಂಗ್ಲರ ಈ ಚಿಂತನೆ ಬಿಸಿಸಿಐ ಸಹಿತ ಇತರ ಕ್ರಿಕೆಟ್ ಮಂಡಳಿಗಳಿಗೂ ಸ್ಪೂರ್ತಿಯಾಗುವ ಸಾಧ್ಯತೆಗಳಿವೆ.
ಸದ್ಯ ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಸಂಕಷ್ಟದಲ್ಲಿರುವ ಕೌಂಟಿ ತಂಡಗಳು ಮತ್ತು ಕ್ರಿಕೆಟ್ ಕ್ಲಬ್ಗಳಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈಗಾಗಲೆ 574 ಕೋಟಿ ರೂ. ಸಹಾಯಧನ ಘೊಷಿಸಿದೆ. ಜತೆಗೆ ಮುಂದಿನ ದಿನಗಳಲ್ಲಿ ಕ್ರಿಕೆಟ್ ಋತು ಪುನರಾರಂಭಗೊಂಡಾಗ ಟೆಸ್ಟ್ ಮತ್ತು ಸೀಮಿತ ಓವರ್ ಕ್ರಿಕೆಟ್ ಪ್ರಕಾರದ ಪಂದ್ಯಗಳಲ್ಲಿ ಏಕಕಾಲದಲ್ಲಿ 2 ಪ್ರತ್ಯೇಕ ರಾಷ್ಟ್ರೀಯ ತಂಡಗಳನ್ನು ಕಣಕ್ಕಿಳಿಸುವ ಯೋಜನೆಯನ್ನೂ ಹಂಚಿಕೊಂಡಿದೆ. ಇದರಿಂದ ಸದ್ಯ ನಷ್ಟವಾಗಿರುವ ಪಂದ್ಯಗಳನ್ನು ಸರಿದೂಗಿಸಿಕೊಳ್ಳಲು ನೆರವಾಗಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2 ಪ್ರತ್ಯೇಕ ಸ್ಥಳಗಳಲ್ಲಿ ಏಕಕಾಲದಲ್ಲಿ 2 ರಾಷ್ಟ್ರೀಯ ತಂಡಗಳನ್ನು ಕಣಕ್ಕಿಳಿಸುವ ಯೋಚನೆಯನ್ನು ಮುಕ್ತವಾಗಿ ಒಪ್ಪಿಕೊಳ್ಳುವೆ ಎಂದು ಮಾರ್ಗನ್ ತಿಳಿಸಿದ್ದಾರೆ. ಇಂಗ್ಲೆಂಡ್ ಈಗಾಗಲೆ ಟೆಸ್ಟ್ ತಂಡಕ್ಕೆ ಜೋ ರೂಟ್ ಅವರನ್ನು ಪ್ರತ್ಯೇಕ ನಾಯಕರನ್ನಾಗಿ ಹೊಂದಿದೆ. ಜೂನ್ ಅಥವಾ ಜುಲೈನಲ್ಲಿ ಕ್ರಿಕೆಟ್ ಪುನರಾರಂಭಗೊಂಡಾಗ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯಗಳನ್ನು ಆಡಬೇಕಿದ್ದರೆ, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಬೇಕಿದೆ. ’ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ 2 ತಂಡಗಳನ್ನು ಕಣಕ್ಕಿಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ. ಕ್ರೀಡೆಗೆ ಈ ರೀತಿಯ ಆರ್ಥಿಕ ಹೊಡೆತ ಹಿಂದೆಂದೂ ಬಿದ್ದಿರಲಿಲ್ಲ. ಆಟಗಾರರಾಗಿ ನಾವು ಮಂಡಳಿಗೆ ಸಾಧ್ಯವಾದಷ್ಟು ರೀತಿಯ ನೆರವು ನೀಡಲು ಸಿದ್ಧರಿರಬೇಕು. ಹಾಲಿ ಪರಿಸ್ಥಿತಿಯಲ್ಲಿ ಮತ್ತೆ ಕ್ರಿಕೆಟ್ ಆಡುವ ಅವಕಾಶ ದೊರೆತರೆ ಸಾಕೆನಿಸಿದೆ. ಮತ್ತೆ ಯಾವಾಗ ಆಡಲಿಳಿಯುತ್ತೇವೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಮಾರ್ಗನ್ ಹೇಳಿದ್ದಾರೆ.
ಇಂಗ್ಲೆಂಡ್ನಲ್ಲಿ ಮೇ 28ರವರೆಗೆ ಎಲ್ಲ ದೇಶೀಯ ಕ್ರಿಕೆಟ್ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಹಾಲಿ ವೇಳಾಪಟ್ಟಿಯ ಪ್ರಕಾರ ಇಂಗ್ಲೆಂಡ್ ತಂಡ ಜೂನ್ 4ರಿಂದ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಬೇಕಿದೆ.
ಇಸಿಬಿಗೆ 2845 ಕೋಟಿ ರೂ. ನಷ್ಟ?
ಮುಂಬರುವ ದೇಶೀಯ ಕ್ರಿಕೆಟ್ ಋತು ಸಂಪೂರ್ಣವಾಗಿ ನಡೆಯದಿದ್ದರೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬರೋಬ್ಬರಿ 2845 ಕೋಟಿ ರೂ. (300 ದಶಲಕ್ಷ ಪೌಂಡ್) ನಷ್ಟ ಅನುಭವಿಸುವ ಭೀತಿ ಇದೆ. ಇಸಿಬಿ ಮುಖ್ಯಸ್ಥ ಟಾಮ್ ಹ್ಯಾರಿಸನ್ ಅವರೇ ಈ ಅಂದಾಜು ಹಾಕಿದ್ದಾರೆ. ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರ ಶೇ. 20ರಷ್ಟು ವೇತನ ಕಡಿತಕ್ಕೆ ಇಸಿಬಿ ಮನವಿ ಮಾಡಿದ್ದರೂ, ಆಟಗಾರರು ಇದಕ್ಕೆ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ವೃತ್ತಿಪರ ಕ್ರಿಕೆಟಿಗರ ಸಂಸ್ಥೆ ಮುಖ್ಯಸ್ಥ ಟೋನಿ ಐರಿಷ್ಗೆ ಪತ್ರ ಬರೆದಿರುವ ಹ್ಯಾರಿಸನ್, ಕನಿಷ್ಠ ಮೂರು ತಿಂಗಳ ವೇತನ ಕಡಿತಕ್ಕೆ ಸಮ್ಮತಿಸುವಂತೆ ಕೇಳಿಕೊಂಡಿದ್ದರು.