ಕ್ರೀಡೆ

ಐಪಿಎಲ್‌ಗೆ ಸಿದ್ಧತೆ ಆರಂಭಿಸಿದ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ

ಚೆನ್ನೈ: ಹಾಲಿ ಹಾಗೂ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್-17ನೇ ಆವೃತ್ತಿಗೆ ಮುನ್ನ ಶನಿವಾರ ಪೂರ್ವ ಸಿದ್ಧತೆ ಶಿಬಿರ ಆರಂಭಿಸಿದ್ದು, ವೇಗಿ ದೀಪಕ್ ಚಹರ್, ಋತುರಾಜ್ ಗಾಯಕ್ವಾಡ್ ಸೇರಿ ಯುವ ಕ್ರಿಕೆಟಿಗರು ಭಾಗಿಯಾಗಿದ್ದಾರೆ. ಭಾರತೀಯ ಯುವ ಕ್ರಿಕೆಟಿಗರಾದ ಸಿಮ್ರಾನ್‌ಜೀತ್ ಸಿಂಗ್, ರಾಜವರ್ಧನ್ ಹಂಗರೆರ್ಕರ್, ಮುಕೇಶ್ ಚೌಧರಿ, ದೀಪಕ ಚಹರ್, ಅಜಯ್ ಮಂಡಲ್ ಅವರನ್ನೊಳಗೊಂಡ ಮೊದಲ ಬ್ಯಾಚ್ ಶುಕ್ರವಾರ ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಕ್ರೀಡಾಂಗಣದಲ್ಲಿ ತಾಲೀಮು ನಡೆಸಿದ್ದು, ಮುಂಬರುವ ದಿನಗಳಲ್ಲಿ ಇತರ ಆಟಗಾರರು ಸೇರ್ಪಡೆಯಾಗಲಿದ್ದಾರೆ.

ತಂದೆಯ ಅನಾರೋಗ್ಯದಿಂದಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿದ್ದಿದ್ದ ದೀಪಕ್ ಚಹರ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ನ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸಿಎಸ್‌ಕೆ ತಂಡದ ನಾಯಕ ಎಂಎ ಧೋನಿ ಶಿಬಿರಕ್ಕೆ ಹಾಜರಾಗುವ ದಿನ ಇನ್ನಷ್ಟೇ ್ರಾಂಚೈಸಿ ಖಚಿತಪಡಿಸಬೇಕಿದೆ. ಧೋನಿ ಹಾಗೂ ಸಾಕ್ಷಿ ದಂಪತಿ ಶುಕ್ರವಾರ ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರನ ವಿವಾಹಪೂರ್ವ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಎಸ್‌ಕೆ ತಂಡ ಐಪಿಎಲ್-17ರ ಉದ್ಘಾಟನಾ ಪಂದ್ಯದಲ್ಲಿ ತವರು ಮೈದಾನ ಚೆಪಾಕ್‌ನಲ್ಲಿ ಆರ್‌ಸಿಬಿ ಸವಾಲು ಎದುರಿಸಲಿದೆ.