ಹೈದರಾಬಾದ್: ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ (62ಕ್ಕೆ 7) ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು 28 ರನ್ಗಳಿಂದ ಆಘಾತಕಾರಿ ಸೋಲು ಅನುಭವಿಸಿದೆ. ಸ್ಪರ್ಧಾತ್ಮಕ ಮೊತ್ತದ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಲು ವಿಫಲವಾದ ಭಾರತ ತಂಡ ದ್ವೀತಿಯ ಇನಿಂಗ್ಸ್ನಲ್ಲಿ ಪ್ರಮುಖ ಬ್ಯಾಟರ್ಗಳ ವೈಫಲ್ಯದಿಂದ ದಿಢೀರ್ ಕುಸಿತ ಕಾಣುವುದರೊಂದಿಗೆ ತವರು ನೆಲದಲ್ಲೇ ಮುಗ್ಗರಿಸಿದೆ. ಇದರೊಂದಿಗೆ ರೋಹಿತ್ ಶರ್ಮ ಬಳಗ 5 ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಕಂಡಿದೆ.
ಆರ್ಜಿಐ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಕಾದಾಟದಲ್ಲಿ 6 ವಿಕೆಟ್ಗೆ 316 ರನ್ಗಳಿಂದ 4ನೇ ದಿನದಾಟ ಮುಂದುವರಿಸಿದ ಇಂಗ್ಲೆಂಡ್, ಭೋಜನ ವಿರಾಮದ ವೇಳೆಗೆ 102.1 ಓವರ್ಗಳಲ್ಲಿ 420 ರನ್ಗಳಿಗೆ 2ನೇ ಇನಿಂಗ್ಸ್ ಮುಗಿಸಿತು. ಇದರೊಂದಿಗೆ ಗೆಲುವಿಗೆ 231 ರನ್ ಸವಾಲು ಪಡೆದ ಭಾರತ, ಉತ್ತಮ ಆರಂಭ ಕಂಡರೂ ನಂತರದಲ್ಲಿ ಹಾರ್ಟ್ಲಿ ದಾಳಿಗೆ ತತ್ತರಿಸಿತು. ವಿಕೆಟ್ ಕೀಪರ್-ಬ್ಯಾಟರ್ ಕೆಎಸ್ ಭರತ್ (28 ರನ್, 59 ಎಸೆತ, 3 ಬೌಂಡರಿ) ಮತ್ತು ಆರ್. ಅಶ್ವಿನ್ (28 ರನ್, 84 ಎಸೆತ, 2 ಬೌಂಡರಿ) ಹೋರಾಟದ ನಡುವೆಯೂ ಭಾರತ ತಂಡ, ಅರ್ಧಗಂಟೆಯವರೆಗೆ ವಿಸ್ತರಿಸಲ್ಪಟ್ಟ ದಿನದಾಟದಲ್ಲಿ 69.2 ಓವರ್ಗಳಲ್ಲಿ 202 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ದ್ವಿಶತಕವಂಚಿತ ಪೋಪ್
148 ರನ್ಗಳಿಂದ ದಿನದಾಟ ಆರಂಭಿಸಿದ ಒಲಿ ಪೋಪ್, ಬಾಲಂಗೋಚಿಗಳ ಜತೆಗೂಡಿ ಆಂಗ್ಲರ ಮೊತ್ತ ಏರಿಸಿದ ನಡುವೆ ದ್ವಿಶತಕ ತಪ್ಪಿಸಿಕೊಂಡರು. ಬೆಳಗ್ಗೆ ರೆಹನ್ ಅಹ್ಮದ್ (28) ಜತೆಗಿನ 7ನೇ ವಿಕೆಟ್ ಜತೆಯಾಟವನ್ನು 64 ರನ್ಗಳಿಗೆ ವಿಸ್ತರಿಸಿದ ಪೋಪ್, 8ನೇ ವಿಕೆಟ್ಗೆ ಟಾಮ್ ಹಾರ್ಟ್ಲಿ (34) ಜತೆಗೂಡಿ ಅಮೂಲ್ಯ 80 ರನ್ ಪೇರಿಸಿದರು. ಈ ಮೂಲಕ ಭಾರತಕ್ಕೆ 200ಕ್ಕೂ ಅಧಿಕ ರನ್ಗಳ ಸವಾಲು ನಿಗದಿಪಡಿಸುವಲ್ಲಿ ಯಶಸ್ವಿಯಾದರು.
ಭಾರತಕ್ಕೆ ಹಾರ್ಟ್ಲಿ ಶಾಕ್
ಆರಂಭಿಕರಾದ ಯಶಸ್ವಿ ಜೈಸ್ವಾಲ್ (15) ಮತ್ತು ನಾಯಕ ರೋಹಿತ್ ಶರ್ಮ (39) ಮೊದಲ ವಿಕೆಟ್ಗೆ 42 ರನ್ ಪೇರಿಸುವ ಮೂಲಕ ಭಾರತದ ಚೇಸಿಂಗ್ಗೆ ಉತ್ತಮ ಬುನಾದಿಯನ್ನೇ ಹಾಕಿದರು. ಆದರೆ ಇವರಿಬ್ಬರನ್ನೂ 3 ಎಸೆತಗಳ ಅಂತರದಲ್ಲಿ ಔಟ್ ಮಾಡಿದ ಹಾರ್ಟ್ಲಿ ಭಾರತಕ್ಕೆ ಆಘಾತ ನೀಡಿದರು. ಶುಭಮಾನ್ ಗಿಲ್ (0) ಮತ್ತು 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಅಕ್ಷರ್ ಪಟೇಲ್ (17) ಕೂಡ ಹಾಟ್ಲಿಗೆ ವಿಕೆಟ್ ಒಪ್ಪಿಸಿದರು. ಅರೆಕಾಲಿಕ ಸ್ಪಿನ್ನರ್ ರೂಟ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದ ಕೆಎಲ್ ರಾಹುಲ್ (22) ಡಿಆರ್ಎಸ್ ಮೊರೆ ಹೋದರೂ ಬಚಾವ್ ಆಗಲಿಲ್ಲ. ಶ್ರೇಯಸ್ ಅಯ್ಯರ್ (13) ವೈಲ್ಯ ಮುಂದುವರಿಸಿದರೆ, ರವೀಂದ್ರ ಜಡೇಜಾ (2) ರನ್ ಕದಿಯಲು ಯತ್ನಿಸಿ ಸ್ಟೋಕ್ಸ್ ಡೈರೆಕ್ಟ್ ಹಿಟ್ಗೆ ರನೌಟಾದರು.
ಅಶ್ವಿನ್-ಭರತ್ ಪ್ರತಿರೋಧ
ಭಾರತ 119 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಸಮಯದಲ್ಲಿ ಅಶ್ವಿನ್-ಭರತ್ ಜೋಡಿ 8ನೇ ವಿಕೆಟ್ಗೆ 130 ಎಸೆತಗಳಲ್ಲಿ 57 ರನ್ ಸೇರಿಸಿ ಗೆಲುವಿನಾಸೆಗೆ ಮರುಜೀವ ತುಂಬಿತು. ಆದರೆ ದಿನದ ನಿಗದಿತ ಓವರ್ ಮುಗಿದು ಇನ್ನೇನು ಪಂದ್ಯ ಅಂತಿಮ ದಿನದಾಟಕ್ಕೆ ವಿಸ್ತರಿಸುವುದೇ ಎಂಬ ಹಂತದಲ್ಲಿದ್ದಾಗ ಹಾರ್ಟ್ಲಿ ಈ ಜತೆಯಾಟ ಮುರಿದು ಭಾರತೀಯರ ಹಾರ್ಟ್ಬ್ರೇಕ್ ಮಾಡಿದರು. ಕೊನೇ ವಿಕೆಟ್ಗೆ ಬುಮ್ರಾ&ಸಿರಾಜ್ 25 ರನ್ ಸೇರಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.
ಭಾರತಕ್ಕೂ ಬಿಸಿ ಮುಟ್ಟಿಸಿದ ಬಜ್ಬಾಲ್!
ಆಂಗ್ಲರ ಕ್ರಾಂತಿಕಾರಿ ಬಜ್ಬಾಲ್ ಕಾರ್ಯತಂತ್ರದಿಂದಾಗಿ ಸರಣಿ ಆರಂಭಕ್ಕೆ ಮೊದಲೇ ತೀವ್ರ ಕುತೂಹಲ ಹುಟ್ಟಿಸಿತ್ತು. ಬ್ರೆಂಡನ್ ಮೆಕ್ಕಲಂ&ಬೆನ್ ಸ್ಟೋಕ್ಸ್ ಕೋಚ್&ಕ್ಯಾಪ್ಟನ್ ಕಾಂಬಿನೇಷನ್ನಲ್ಲಿ ತವರು ಮಾತ್ರವಲ್ಲದೆ, ಪಾಕಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೆಲಿಯಾದಲ್ಲಿ ಯಶಸ್ಸು ಕಂಡಿದ್ದ ಈ ಆಕ್ರಮಣಕಾರಿ ಆಟ ಭಾರತದಲ್ಲೂ ಫಲಿಸುವುದೇ ಎಂಬ ಕುತೂಹಲ ಹರಡಿತ್ತು ಮತ್ತು ಅದು ಇಲ್ಲಿ ಫಲಿಸದು ಎಂಬ ಆತ್ಮವಿಶ್ವಾಸವೂ ಭಾರತೀಯರದ್ದಾಗಿತ್ತು. ಆದರೆ ಸರಣಿಯ ಮೊದಲ ಟೆಸ್ಟ್ನಲ್ಲೇ ಭಾರತ ಸೋಲುವುದರೊಂದಿಗೆ ಬಜ್ಬಾಲ್ ಬಿಸಿ ಮುಟ್ಟಿಸಿದೆ. ಆಂಗ್ಲರ ಆಟ ಭಾರತದಲ್ಲಿ ಇತರೆಡೆಯಷ್ಟು ಆಕ್ರಮಣಕಾರಿ ಆಗಿರದಿದ್ದರೂ, ವಿಕೆಟ್ ಬಿದ್ದಾಗಲೂ ಎದೆಗುಂದದೆ ಅವಕಾಶ ಸಿಕ್ಕಾಗಲೆಲ್ಲ ರನ್ ಗಳಿಸುತ್ತ ಸಾಗುವ ಬಜ್ಬಾಲ್ ತಂತ್ರ ಯಶಸ್ಸನ್ನೇ ನೀಡಿದೆ ಎನ್ನಬಹುದು.
*231 ರನ್ ಚೇಸಿಂಗ್ ಮಾಡಬಹುದಾಗಿತ್ತು. ಆದರೆ ನಮ್ಮಿಂದ ಸಾಧ್ಯವಾಗಲಿಲ್ಲ. 190 ರನ್ ಮುನ್ನಡೆಯೊಂದಿಗೆ ನಾವು ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದ್ದರೂ, ಪೋಪ್ ಅದ್ಭುತ ಬ್ಯಾಟಿಂಗ್ ಪಂದ್ಯವನ್ನು ಕಸಿಯಿತು.
| ರೋಹಿತ್ ಶರ್ಮ, ಟೀಮ್ ಇಂಡಿಯಾ ನಾಯಕ
*ಬಾಲಂಗೋಚಿಗಳ ಎದುರು ಅಶ್ವಿನ್-ಜಡೇಜಾ ಪರದಾಟ
ಜಾನಿ ಬೇರ್ಸ್ಟೋ, ಬೆನ್ ಸ್ಟೋಕ್ಸ್ರಂಥ ಪ್ರಮುಖ ಬ್ಯಾಟರ್ಗಳಿಗೆ ಕಡಿವಾಣ ಹಾಕಿದ ಅಶ್ವಿನ್-ಜಡೇಜಾ ಸ್ಪಿನ್ ಜೋಡಿ ಇಂಗ್ಲೆಂಡ್ ತಂಡದ ಬಾಲಂಗೋಚಿಗಳಿಗೆ ನಿಯಂತ್ರಣ ಹೇರಲು ಪರದಾಡಿತು. ಪಂದ್ಯದ ಮೊದಲ ದಿನವೇ ಆಂಗ್ಲರಿಗೆ ಆಘಾತ ನೀಡಿದ್ದ ಜೋಡಿ, 4ನೇ ದಿನದಾಟದಲ್ಲಿ ಬಾಲಂಗೋಚಿಗಳಿಗೆ ಹೆಚ್ಚಿನ ಸಮಯ ಕ್ರೀಸ್ನಲ್ಲಿ ನಿಲ್ಲಲು ಅವಕಾಶ ಕಲ್ಪಿಸಿತು. ಒಲಿ ಪೋಪ್ ಕೂಡ ಸ್ವೀಪ್, ರಿವರ್ಸ್ ಸ್ವೀಪ್ಗಳ ಮೂಲಕ ಸ್ಪಿನ್ನರ್ಗಳನ್ನು ಸಮರ್ಥವಾಗಿಯೇ ಎದುರಿಸಿದರು. 163 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಕೊನೇ 5 ವಿಕೆಟ್ಗಳ ನೆರವಿನಿಂದ 257 ರನ್ ಕಲೆಹಾಕಿತು.
*1: ತವರಿನ ಟೆಸ್ಟ್ ಪಂದ್ಯದಲ್ಲಿ 100ಕ್ಕೂ ಅಧಿಕ ರನ್ ಮುನ್ನಡೆ ಸಾಧಿಸಿದ ಬಳಿಕ ಭಾರತ ತಂಡ ಸೋಲು ಕಂಡ ಮೊದಲ ದೃಷ್ಟಾಂತ ಇದಾಗಿದೆ.
4: ಒಲಿ ಪೋಪ್ ಗಳಿಸಿದ 196 ರನ್ ಭಾರತದಲ್ಲಿನ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ವಿದೇಶಿ ಬ್ಯಾಟರ್ ಗಳಿಸಿದ 4ನೇ ಗರಿಷ್ಠ ರನ್ ಆಗಿದೆ. ಆಂಡಿ ಫ್ಲವರ್ (232*), ಬ್ರೆಂಡನ್ ಮೆಕ್ಕಲಂ (225) ಮತ್ತು ಗ್ಯಾರಿ ಸೋಬರ್ಸ್ (198) ಮೊದಲ 3 ಸ್ಥಾನದಲ್ಲಿದ್ದಾರೆ.
*14: ಮೆಕ್ಕಲಂ-ಸ್ಟೋಕ್ಸ್ರ ಬಜ್ಬಾಲ್ ಕಾರ್ಯತಂತ್ರದೊಂದಿಗೆ ಇಂಗ್ಲೆಂಡ್ ಆಡಿದ 19 ಟೆಸ್ಟ್ಗಳಲ್ಲಿ ಕಂಡ 14ನೇ ಗೆಲುವು ಇದಾಗಿದೆ.
ಡಬ್ಲ್ಯುಟಿಸಿಯಲ್ಲಿ 5ನೇ ಸ್ಥಾನಕ್ಕೆ ಕುಸಿತ
ಭಾರತ ತಂಡ (ಶೇ.43.33) ಸೋಲಿನೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) 3ನೇ ಆವೃತ್ತಿಯ ಅಂಕಪಟ್ಟಿಯಲ್ಲಿ 2ರಿಂದ 5ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೆಲಿಯಾ (ಶೇ.55) ತಂಡ ವಿಂಡೀಸ್ ಎದುರು ಸೋಲು ಕಂಡ ನಡುವೆಯೂ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಇಂಗ್ಲೆಂಡ್ (ಶೇ.29.16) 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
4: ಭಾರತಕ್ಕೆ 2013ರ ನಂತರ ತವರಿನಲ್ಲಿ ಇದು 4ನೇ ಟೆಸ್ಟ್ ಸೋಲು ಮತ್ತು ಹೈದರಾಬಾದ್ನಲ್ಲಿ ಮೊದಲ ಸೋಲಾಗಿದೆ.