ಕ್ರೀಡೆ

ಭರ್ಜರಿ ದ್ವಿಶತಕದ ಮೂಲಕ ಇಂಗ್ಲೆಂಡ್‌ನಲ್ಲಿ ಅಬ್ಬರಿಸಿದ ಮುಂಬೈ ಬ್ಯಾಟರ್

ಬೆಂಗಳೂರು: ವಿವಾದಗಳಿಂದಲ್ಲೇ ಹೆಚ್ಚು ಸುದ್ದಿಯಲ್ಲಿರುವ ಭಾರತದ ಯುವ ಬ್ಯಾಟರ್ ಪೃಥ್ವಿ ಷಾ ಇಂಗ್ಲೆಂಡ್‌ನ ದೇಶೀಯ ಏಕದಿನ ಟೂರ್ನಿಯಲ್ಲಿ ದ್ವಿಶತಕ ಬಾರಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ನಾರ್ಥಾಂಪ್ಟನ್‌ಶೈರ್ ಪರ ಆಡುತ್ತಿರುವ ಮುಂಬೈ ಬ್ಯಾಟರ್ ಪೃಥ್ವಿ ಷಾ 153 ಎಸೆತಗಳಲ್ಲಿ 244 ರನ್‌ಗಳಿಸುವ ಮೂಲಕ ಅಬ್ಬರಿಸಿದ್ದು ಾರ್ಮ್‌ಗೆ ಮರಳಿದ್ದಾರೆ.

ಮೊದಲ ಬಾರಿಗೆ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿರುವ 23 ವರ್ಷದ ಪೃಥ್ವಿ ಷಾ ಬರೋಬ್ಬರಿ 28 ಬೌಂಡರಿ ಮತ್ತು 11 ಸಿಕ್ಸರ್ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡನೇ ದ್ವಿಶತಕ ಸಿಡಿಸಿದ ಸಾಧನೆ ಮಾಡಿದರು. ನಾರ್ಥಾಂಪ್ಟನ್‌ಶೈರ್ ಪರ ಹಾಲಿ ಋತುವಿನಲ್ಲಿ ಮೂರನೇ ಪಂದ್ಯ ಆಡಿದ ಪೃಥ್ವಿ ಷಾ 81 ಎಸೆತಗಳಲ್ಲಿ ಚೊಚ್ಚಲ ಶತಕಗಳಿಸಿದರು. ಬಳಿಕ ಕೇವಲ 129 ಎಸೆತಗಳಲ್ಲಿ 24 ಬೌಂಡರಿ ಮತ್ತು ಎಂಟು ಸಿಕ್ಸರ್ ನೆರವಿನಿಂದ 200 ರನ್ ಕಲೆಹಾಕಿದರು. ಗ್ಲೌಸೆಸ್ಟರ್‌ಶೈರ್ ವಿರುದ್ಧದ ಮೊದಲ ಪಂದ್ಯದಲ್ಲಿ 34 ರನ್‌ಗಳಿಸಿದ್ದಾಗ ಹಿಟ್ ವಿಕೆಟ್ ಮೂಲಕ ಔಟಾಗಿ ಸದ್ದು ಮಾಡಿದ್ದ ಪೃಥ್ವಿ ಷಾ, ಎರಡನೇ ಪಂದ್ಯದಲ್ಲಿ 26 ರನ್‌ಗಳಿಸಲು ಮಾತ್ರ ಶಕ್ತರಾಗಿದ್ದರು.

ಜತೆಗೆ ಇಂಗ್ಲೆಂಡ್‌ನ ಲಿಸ್ಟ್ ಎ ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯಾವಳಿಯಲ್ಲಿ ಕಳೆದ ವರ್ಷ ದಾಖಲಾದ ಅತ್ಯಧಿಕ ಸ್ಕೋರ್ ದಾಖಲೆಯನ್ನು ಕೂಡ ಮುರಿದಿದ್ದಾರೆ. ಕೆಂಟ್‌ನ ಒಲಿ ರಾಬಿನ್ಸನ್ ಮತ್ತು ಸಸೆಕ್ಸ್‌ನ ಅಲಿ ಓರ್ 2022ರ ಆವೃತ್ತಿಯಲ್ಲಿ ತಲಾ 206 ರನ್ ಗಳಿಸಿ ಈ ಟೂರ್ನಿಯಲ್ಲಿ ಮೊದಲ ಬಾರಿಗೆ ದ್ವಿಶತಕಗಳನ್ನು ಸಿಡಿಸಿದ ಸಾಧನೆ ಮಾಡಿದ್ದರು.

ಫೆಬ್ರವರಿ 2021ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಪುದುಚೇರಿ ವಿರುದ್ಧ ೃಥ್ವಿ ಷಾ (227*) ಚೊಚ್ಚಲ ದ್ವಿಶತಕ ಬಾರಿಸಿದ್ದರು. ಅಸ್ಸಾಂ ವಿರುದ್ಧದ 379 ರನ್‌ಗಳಿಸಿದ್ದು ರಣಜಿ ಟ್ರೋಫಿಯಲ್ಲಿನ ಗರಿಷ್ಠ ರನ್ ಎನಿಸಿದೆ.