ಕ್ರೀಡೆ

ಪಾಕಿಸ್ತಾನ ವಿರುದ್ಧ ಟೆಸ್ಟ್​ ಸರಣಿಯಿಂದ ಹೊರನಡೆದ ಬೆನ್​ ಸ್ಟೋಕ್ಸ್​, ಕಾರಣವೇನು ಗೊತ್ತೇ?

ಲಂಡನ್​: ಕಳೆದ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಇಂಗ್ಲೆಂಡ್​ ಆಲ್ರೌಂಡರ್​ ಬೆನ್​ ಸ್ಟೋಕ್ಸ್​, ಪ್ರವಾಸಿ ಪಾಕಿಸ್ತಾನ ವಿರುದ್ಧ ಪ್ರಸಕ್ತ ನಡೆಯುತ್ತಿರುವ ಟೆಸ್ಟ್​ ಸರಣಿಯಿಂದ ಹೊರನಡೆದಿದ್ದಾರೆ. ಸರಣಿಯ ಕೊನೆಯ 2 ಪಂದ್ಯಗಳಿಗೆ ಬೆನ್​ ಸ್ಟೋಕ್ಸ್​ ಅಲಭ್ಯರಾಗಿದ್ದಾರೆ. ಇದಕ್ಕೆ ಅವರು ಕೌಟುಂಬಿಕ ಕಾರಣವನ್ನು ನೀಡಿದ್ದಾರೆ.

ವಿಶ್ವ ನಂ. 1 ಆಲ್ರೌಂಡರ್​ ಆಗಿರುವ ಬೆನ್​ ಸ್ಟೋಕ್ಸ್​ ಇದೀಗ ಕುಟುಂಬದ ಜತೆಗೆ ನ್ಯೂಜಿಲೆಂಡ್​ನಲ್ಲಿ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ. ಹೀಗಾಗಿ ಪಾಕಿಸ್ತಾನ ವಿರುದ್ಧ ಮ್ಯಾಂಚೆಸ್ಟರ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ಬೆನ್ನಲ್ಲೇ ಅವರು ನ್ಯೂಜಿಲೆಂಡ್​ನತ್ತ ಮುಖ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್​ ಪಂದ್ಯ ಆಗಸ್ಟ್​ 13ರಿಂದ ಸೌಥಾಂಪ್ಟನ್​ನಲ್ಲಿ ನಡೆಯಲಿದೆ. ಕೊನೆಯ ಟೆಸ್ಟ್​ ಆಗಸ್ಟ್​ 21ರಿಂದ ಅಲ್ಲೇ ನಡೆಯಲಿದೆ.

2013ರಲ್ಲಿ ಕ್ಲಾರ್​ ರಾಟ್​ಕ್ಲಿಫ್​ರನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿರುವ 29 ವರ್ಷದ ಬೆನ್​ ಸ್ಟೋಕ್ಸ್​ ಅವರು ಈಗ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ. ಮಾಜಿ ರಗ್ಬಿ ಆಟಗಾರರಾಗಿರುವ ಅವರ ತಂದೆ ಗೆರಾರ್ಡ್​ ಸ್ಟೋಕ್ಸ್​, ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುವ ಸಲುವಾಗಿ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಬಂಧಿಯಾಗಿರಲು ಬಯಸಿಲ್ಲ. ತಂದೆ-ತಾಯಿಯನ್ನು ಕರೆದುಕೊಂಡು ಮೂಲದೇಶ ನ್ಯೂಜಿಲೆಂಡ್​ಗೆ ತೆರಳಿ ಸಮಯ ಕಳೆಯುವತ್ತ ಗಮನಹರಿಸಿದ್ದಾರೆ. ನ್ಯೂಜಿಲೆಂಡ್​ನಲ್ಲಿ ಕರೊನಾ ವೈರಸ್​ ಸಂಪೂರ್ಣ ನಿಯಂತ್ರಣದಲ್ಲಿರುವುದು ಕೂಡ ಅವರಿಗೆ ಅನುಕೂಲಕರವೆನಿಸಿದೆ. ಬೆನ್​ ಸ್ಟೋಕ್ಸ್ ತಂದೆಯ ಜತೆಗೆ ಸದೃಢ ಬಾಂಧವ್ಯ ಹೊಂದಿದ್ದು, ಇಳಿ ವಯಸ್ಸಿನಲ್ಲಿ ಅವರಿಗೆ ಹೆಚ್ಚಿನ ಸಮಯ ನೀಡಲು ಬಯಸಿದ್ದಾರೆ ಎನ್ನಲಾಗಿದೆ. ಮುಂಬರುವ ಐಪಿಎಲ್​ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯಬೇಕಿರುವ ಅವರು ಟೂರ್ನಿಗೆ ಲಭ್ಯರಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.