ಪಾರ್ಲ್: ಪ್ರವಾಸಿ ಇಂಗ್ಲೆಂಡ್ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್‌ಗೆ 146 ರನ್ ಪೇರಿಸಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ ಡೇವಿಡ್ ಮಲಾನ್ (55 ರನ್, 40 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ 19. 5 ಓವರ್‌ಗಳಲ್ಲಿ 6 ವಿಕೆಟ್‌ಗೆ 147 ರನ್ ಗಳಿಸಿ ಜಯಿಸಿತು. ಅಂತಿಮ ಪಂದ್ಯ ಮಂಗಳವಾರ ನಡೆಯಲಿದೆ.
ನಾಯಕ ಕ್ವಿಂಟನ್ ಡಿಕಾಕ್ (30), ವಾನ್ ಡರ್ ಡುಸೆನ್ (25) ಮತ್ತು ಜಾರ್ಜ್ ಲಿಂಡೆ (29) ದಕ್ಷಿಣ ಆಫ್ರಿಕಾಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಪವರ್‌ಪ್ಲೇಯಲ್ಲಿ 50 ರನ್ ಪೇರಿಸಿ ಆತಿಥೇಯ ತಂಡ ಉತ್ತಮ ಆರಂಭ ಕಂಡಿತ್ತು. ಆದರೆ ನಂತರದ 50 ರನ್ ಗಳಿಸಲು ಇನಿಂಗ್ಸ್‌ನ 15ನೇ ಓವರ್‌ವರೆಗೂ ಪರದಾಡಿತು. ಸ್ಪಿನ್ನರ್ ಆದಿಲ್ ರಶೀದ್ (23ಕ್ಕೆ 2) ಮತ್ತು ವೇಗಿ ಜೋಫ್ರಾ ಆರ್ಚರ್ (18ಕ್ಕೆ 1) ಕಡಿವಾಣ ಹಾಕಿದರು.
ಜೇಸನ್ ರಾಯ್ (14) ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಆರಂಭಿಕ ಆಘಾತ ಎದುರಿಸಿದ ಬಳಿಕ ವನ್‌ಡೌನ್ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ತಂಡಕ್ಕೆ ಆಸರೆಯಾಗಿ ನಿಂತರು. ಕಳೆದ ಪಂದ್ಯದ ಹೀರೋ ಜಾನಿ ಬೇರ್‌ಸ್ಟೋ (3) ಮತ್ತು ಬೆನ್ ಸ್ಟೋಕ್ಸ್ (16) ಹೆಚ್ಚು ನಿಲ್ಲದೆ ನಿರಾಸೆ ಮೂಡಿಸಿದ ಬಳಿಕ ನಾಯಕ ಇವೊಯಿನ್ ಮಾರ್ಗನ್ (26*) ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ನಿರ್ವಹಿಸಿದರು.
ದಕ್ಷಿಣ ಆಫ್ರಿಕಾ: 6 ವಿಕೆಟ್‌ಗೆ 146 (ಬವುಮಾ 13, ಡಿಕಾಕ್ 30, ಪ್ಲೆಸಿಸ್ 11, ಡುಸೆನ್ 25*, ಲಿಂಡೆ 29, ರಶೀದ್ 23ಕ್ಕೆ 2, ಆರ್ಚರ್ 18ಕ್ಕೆ 1, ಟಾಮ್ ಕರ‌್ರನ್ 37ಕ್ಕೆ 1, ಜೋರ್ಡನ್ 29ಕ್ಕೆ 1). ಇಂಗ್ಲೆಂಡ್: 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 147 (ಬಟ್ಲರ್ 22, ಮಲಾನ್ 55, ಬೇರ್‌ಸ್ಟೋ 3, ಸ್ಟೋಕ್ಸ್ 16, ಮಾರ್ಗನ್ 26*, ಶಮ್ಸಿ 19ಕ್ಕೆ 3, ಎನ್‌ಗಿಡಿ 51ಕ್ಕೆ 2). ಪಂದ್ಯಶ್ರೇಷ್ಠ: ಡೇವಿಡ್ ಮಲಾನ್.