ನವದೆಹಲಿ: ಒಲಿಂಪಿಕ್ಸ್ಗೆ ಬರೋಬ್ಬರಿ 128 ವರ್ಷಗಳ ಬಳಿಕ ಕ್ರಿಕೆಟ್ ಸ್ಪರ್ಧೆ ಸೇರ್ಪಡೆಯಾಗಿದ್ದು, 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ನಲ್ಲಿ ಟಿ20 ಪ್ರಕಾರದಲ್ಲಿ ಪದಕಕ್ಕಾಗಿ ಪೈಪೋಟಿ ನಡೆಯಲಿದೆ. ಆದರೆ ಇದು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದು, ಕ್ರಮವಾಗಿ ಒಗ್ಗೂಡುವ ಮತ್ತು ಬೇರ್ಪಡುವ ಸವಾಲನ್ನು ಹುಟ್ಟುಹಾಕಿದೆ.
ಒಲಿಂಪಿಕ್ಸ್ನಲ್ಲಿ ಇಂಗ್ಲೆಂಡ್ಗೆ ಬದಲಾಗಿ ಬ್ರಿಟನ್ ಸ್ಪರ್ಧಿಸುತ್ತದೆ. ಅಂದರೆ ಇದರಲ್ಲಿ ಸ್ಕಾಟ್ಲೆಂಡ್ ಮತ್ತು ವೇಲ್ಸ್ ಸ್ಪರ್ಧಿಗಳೂ ಸೇರಿರುತ್ತಾರೆ. ಇದೇ ಕಾರಣಕ್ಕಾಗಿ ಒಲಿಂಪಿಕ್ಸ್ ಫುಟ್ಬಾಲ್ ಸ್ಪರ್ಧೆ ಅವಕಾಶ ಆಂಗ್ಲರಿಗೆ ಕೈತಪು$್ಪತ್ತ ಬಂದಿದೆ. ಇದೀಗ ಕ್ರಿಕೆಟ್ನಲ್ಲೂ ಇಂಥದ್ದೇ ಪರಿಸ್ಥಿತಿ ಎದುರಾಗುವ ಭೀತಿ ಕಾಡುತ್ತಿದೆ. ಒಲಿಂಪಿಕ್ಸ್ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿ ಸ್ಕಾಟ್ಲೆಂಡ್, ವೇಲ್ಸ್ ಜತೆಗೂಡಿ ತಂಡ ಕಟ್ಟುವ ಸವಾಲು ಇಂಗ್ಲೆಂಡ್ ಮುಂದಿದೆ. ಟಿ20 ರ್ಯಾಂಕಿಂಗ್ ಅನ್ವಯ ಅರ್ಹತೆ ಸಿಕ್ಕರೆ ಬ್ರಿಟನ್ ಹೆಸರಿನಲ್ಲೇ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಯೋಜಿಸಿದೆ. ಒಲಿಂಪಿಕ್ಸ್ಗೆ ಇನ್ನೂ 4 ವರ್ಷಗಳಿದ್ದು, ಶ್ರೀ ಈ ಬಗ್ಗೆ ಚರ್ಚಿಸಲಾಗುವುದು ಎಂದು ಇಸಿಬಿ ತಿಳಿಸಿದೆ.
ಮತ್ತೊಂದೆಡೆ ವೆಸ್ಟ್ ಇಂಡೀಸ್ ಒಲಿಂಪಿಕ್ಸ್ಗಾಗಿ ಬೇರ್ಪಡುವ ಇಕ್ಕಟ್ಟು ಎದುರಿಸಿದೆ. ಕೆರಿಬಿಯನ್ ದೇಶಗಳು ಒಲಿಂಪಿಕ್ಸ್ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತವೆ. ಹೀಗಾಗಿ ವೆಸ್ಟ್ ಇಂಡೀಸ್ಗೆ ಒಲಿಂಪಿಕ್ಸ್ ಅರ್ಹತೆ ಸಿಕ್ಕರೂ, ಕೆರಿಬಿಯನ್ ದ್ವೀಪಸಮೂಹದ ಒಂದು ದೇಶವಷ್ಟೇ ಪ್ರತ್ಯೇಕವಾಗಿ ಸ್ಪರ್ಧಿಸಬಹುದು. ಆಗ ಪದಕ ಗೆಲ್ಲುವ ಅವಕಾಶವೂ ಣಿಸಲಿರುವುದು ಸಂದಿಗ್ಧತೆ ಸೃಷ್ಟಿಸಿದೆ.
ಪಾಕಿಸ್ತಾನಕ್ಕೆ ರ್ಯಾಂಕ್ ಸುಧಾರಿಸುವ ಸವಾಲು
ಇತ್ತೀಚೆಗೆ ಐಸಿಸಿ ಟೂರ್ನಿಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಕಡ್ಡಾಯವೆನಿಸಿದೆ. ಆದರೆ ಒಲಿಂಪಿಕ್ಸ್ನಲ್ಲಿ ಈ ತಂಡಗಳ ಹೈವೋಲ್ಟೇಜ್ ಕಾದಾಟದ ಗ್ಯಾರಂಟಿ ನೀಡಲಾಗದು. ಯಾಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಒಲಿಂಪಿಕ್ಸ್ ಅರ್ಹತೆಯೇ ಕಠಿಣವೆನಿಸಿದೆ. ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ತಂಡಗಳಿಗೆ ಯಾವ ರೀತಿಯಲ್ಲಿ ಅರ್ಹತೆ ನೀಡಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಐಸಿಸಿ ಟಿ20 ರ್ಯಾಂಕಿಂಗ್ ಅನ್ವಯ ಅಗ್ರ 5 ತಂಡಗಳಿಗೆ ಅರ್ಹತೆ ನೀಡುವ ಸಾಧ್ಯತೆಯೇ ಅಧಿಕವಾಗಿದೆ. ಪಾಕಿಸ್ತಾನ ಸದ್ಯ ಟಿ20 ರ್ಯಾಂಕಿಂಗ್ನಲ್ಲಿ 7ನೇ ಸ್ಥಾನದಲ್ಲಿದ್ದು, ಮುಂದಿನ 4 ವರ್ಷಗಳಲ್ಲಿ ಸ್ಥಿರ ನಿರ್ವಹಣೆ ತೋರದಿದ್ದರೆ ಒಲಿಂಪಿಕ್ಸ್ ಅರ್ಹತೆ ಕೈತಪ್ಪಲಿದೆ.