ಕ್ರೀಡೆ

ವಿಶ್ವಕಪ್​ನಲ್ಲಿ ಇಂಗ್ಲೆಂಡ್​ಗೆ ಇನ್ನೂ ಇದೆ ಸೆಮೀಸ್​ ಚಾನ್ಸ್​! ಹೀಗಿದೆ ಲೆಕ್ಕಾಚಾರ…

ಬೆಂಗಳೂರು: ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಒಂದರಲ್ಲಷ್ಟೇ ಗೆದ್ದು 4ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಹೊರತಾಗಿಯೂ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ ರೇಸ್​ನಿಂದ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ! ಭಾನುವಾರ ಲಖನೌದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ ಗೆದ್ದರೆ ಆಂಗ್ಲರಿಗೂ ಸೆಮೀಸ್​ ಆಸೆ ಜೀವಂತವಾಗಿರಲಿದೆ. ಆದರೆ ಈ ಲೆಕ್ಕಾಚಾರ ಅತ್ಯಂತ ಜಟಿಲವಾಗಿದೆ.

ಜೋಸ್​ ಬಟ್ಲರ್​ ಬಳಗಕ್ಕೆ ಈಗ ಗರಿಷ್ಠ 10 ಅಂಕ (5 ಜಯ) ಕಲೆಹಾಕುವ ಅವಕಾಶವಿದೆ. ಇದರಲ್ಲಿ ಇಂಗ್ಲೆಂಡ್​ ಯಶಸ್ವಿಯಾದರೆ, 3ಕ್ಕಿಂತ ಹೆಚ್ಚು ತಂಡಗಳು 5ಕ್ಕಿಂತ ಹೆಚ್ಚು ಪಂದ್ಯ ಗೆಲ್ಲಬಾರದು. ಅಂದರೆ ನ್ಯೂಜಿಲೆಂಡ್​ ಅಥವಾ ಆಸ್ಟ್ರೆಲಿಯಾ ಇನ್ನುಳಿದ 3 ಪಂದ್ಯಗಳಲ್ಲಿ 2ರಲ್ಲಾದರೂ ಸೋಲಬೇಕು. ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳೂ ಇನ್ನುಳಿದ 4 ಪಂದ್ಯಗಳಲ್ಲಿ 1ರಲ್ಲಾದರೂ ಸೋಲಬೇಕು.

ಆದರೆ ಇದೆಲ್ಲಕ್ಕಿಂತ ಆಂಗ್ಲರಿಗೆ ಹೆಚ್ಚು ಸವಾಲಿನ ಟಾಸ್ಕ್​ ಎಂದರೆ ರನ್​ರೇಟ್​ ಸುಧಾರಣೆ. ಪ್ರಸಕ್ತ ಆಂಗ್ಲರ ರನ್​ರೇಟ್​ (-1.634) ಎಲ್ಲರಿಗಿಂತ ಕಳಪೆಯಾಗಿದೆ. 4-5 ತಂಡಗಳು ಗರಿಷ್ಠ 10 ಅಂಕ ಕಲೆಹಾಕಿದರೆ, ಉತ್ತಮ ರನ್​ರೇಟ್​ ಹೊಂದಿರುವ ತಂಡಕ್ಕೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಮತ್ತು ಸೆಮಿಫೈನಲ್​ ಪ್ರವೇಶ ಒಲಿಯಲಿದೆ.