ಕ್ರೀಡೆ

ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಇಂಗ್ಲೆಂಡ್ ವೇಗಿ ಜೇಮ್ಸ್​ ಆ್ಯಂಡರ್ಸನ್!

ಲಂಡನ್​: ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್ ಅವರು ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧ ಇಂದು (ಶುಕ್ರವಾರ) ಮುಕ್ತಾಯ ಕಂಡ ಟೆಸ್ಟ್​ ಪಂದ್ಯ ಅವರಿಗೆ ಕೊನೆಯ ಪಂದ್ಯವಾಯಿತು. ಈ ಪಂದ್ಯವನ್ನು ಇಂಗ್ಲೆಂಡ್​ ಇನಿಂಗ್ಸ್​ ಹಾಗೂ 114 ರನ್​ಗಳಿಂದ ಗೆದ್ದು ಬೀಗಿತು. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. 2002ರಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಆಂಡರ್ಸನ್, 2003ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಬರೋಬ್ಬರಿ 22 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಜೇಮ್ಸ್ ಆಂಡರ್ಸನ್ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಎಂದಿನಂತೆ ತಮ್ಮ ಕೊನೆಯ ಪಂದ್ಯದಲ್ಲೂ ವಿಕೆಟ್​ಗಳ ಬೇಟೆ ನಡೆಸಿದ್ದ ಆ್ಯಂಡರ್ಸನ್ ಒಟ್ಟು 4 ವಿಕೆಟ್​ಗಳನ್ನು ಉರುಳಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 1 ವಿಕೆಟ್ ಉರುಳಿಸಿದ್ದ ಆಂಡರ್ಸನ್ ಎರಡನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಕಬಳಿಸಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ 2 ದಶಕಕ್ಕೂ ಅಧಿಕ ಸಮಯ ಇಂಗ್ಲೆಂಡ್‌ ತಂಡದ ಪರ ಆಡಿ ವಿಶ್ವ ದಾಖಲೆಯ 700ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದು 41ನೇ ವಯಸ್ಸಿನಲ್ಲಿ ನಿವೃತ್ತಿಗೆ ಮನಸ್ಸು ಮಾಡಿರುವ ಫಿಟ್‌ ಅಂಡ್‌ ಫೈನಲ್‌ ಜಿಮ್ಮಿ ಆಂಡರ್ಸನ್‌, ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ಅವರು 32 ಬಾರಿ ಐದು ವಿಕೆಟ್‌ಗಳನ್ನು ಮತ್ತು ಮೂರು ಬಾರಿ 10 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

ಒಟ್ಟಾರೆಯಾಗಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್​ಗಳ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್​ ( 708) ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.