ಕ್ರೀಡೆ

ಆಂಡರ್‌ಸನ್‌ಗೆ ಗೆಲುವಿನ ವಿದಾಯ: ವಿಂಡೀಸ್ ಎದುರು ಲಾರ್ಡ್ಸ್ ಟೆಸ್ಟ್‌ನಲ್ಲಿ ಆಂಗ್ಲರಿಗೆ ಇನಿಂಗ್ಸ್ ಜಯ

ಲಂಡನ್: ತವರಿನ ಲಾರ್ಡ್ಸ್ ಅಂಗಣದಲ್ಲಿ ವೇಗಿ ಜೇಮ್ಸ್ ಆಂಡರ್‌ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗೆಲುವಿನ ವಿದಾಯ ಹೇಳಿದ್ದಾರೆ. ಪದಾರ್ಪಣೆಯ ಟೆಸ್ಟ್‌ನಲ್ಲಿ ಮಿಂಚಿದ ಗಸ್ ಆಟ್ಕಿನ್‌ಸನ್ (61ಕ್ಕೆ 5) ಮಾರಕ ದಾಳಿಯ ನೆರವಿನಿಂದ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಎದುರು ಇನಿಂಗ್ಸ್ ಹಾಗೂ 114 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಎರಡೂವರೆ ದಿನಗಳಲ್ಲೇ ಗೆಲುವು ಒಲಿಸಿಕೊಂಡ ಬೆನ್ ಸ್ಟೋಕ್ಸ್ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಪಂದ್ಯದ ಮೂರನೇ ದಿನವಾದ ಶುಕ್ರವಾರ 6 ವಿಕೆಟ್‌ಗೆ 76 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ವಿಂಡೀಸ್, 47 ಓವರ್‌ಗಳಲ್ಲಿ 136 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಅನುಭವಿಸಿತು. ದಿನದ ಒಂದೂವರೆ ಗಂಟೆಯಲ್ಲಿ ಆಂಗ್ಲರು ಉಳಿದ 4 ವಿಕೆಟ್ ಉರುಳಿಸಿದರು. 188ನೇ ಟೆಸ್ಟ್ ಪಂದ್ಯ ಆಡಿದ ಆಂಡರ್‌ಸನ್ 2ನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ 7 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಗಸ್ ಅಟ್ಕಿನ್‌ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವೆಸ್ಟ್‌ಇಂಡೀಸ್: 121 ಹಾಗೂ 136 (ಗುಡಕೇಶ್ 31*, ಶಮರ್ 3, ಜೈಡೇನ್ 8, ಆಂಡರ್‌ಸನ್ 32ಕ್ಕೆ 3, ಅಟ್ಕಿನ್‌ಸನ್ 61ಕ್ಕೆ 5, ಸ್ಟೋಕ್ಸ್ 25ಕ್ಕೆ 2). ಇಂಗ್ಲೆಂಡ್: 371.

704 ವಿಕೆಟ್‌ಗಳೊಂದಿಗೆ ಆಂಡರ್‌ಸನ್ ಗುಡ್‌ಬೈ: 2003ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಅಂಗಣದಲ್ಲಿಯೆ ಜೇಮ್ಸ್ ಆಂಡರ್‌ಸನ್ ತನ್ನ ಕೊನೆಯ ಪಂದ್ಯವನ್ನಾಡಿದರು. ಪಂದ್ಯದ ಮೂರನೇ ದಿನದ ಆಟಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ಆಂಡರ್‌ಸನ್‌ಗೆ ಗಾರ್ಡ್ ಆ್ ಆನರ್ ಮೂಲಕ ಗೌರವ ಸೂಚಿಸಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ವೇಗಿ ಎನಿಸಿರುವ ಆಂಡರ್‌ಸನ್ ತನ್ನ 41ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರು. ಟೆಸ್ಟ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ವಿಕೆಟ್ ಪಡೆದಿರುವವರಲ್ಲಿ ಲಂಕಾದ ಮುತ್ತಯ್ಯ ಮುರುಳೀಧರನ್ (800) ಹಾಗೂ ಆಸೀಸ್‌ನ ಶೇನ್ ವಾರ್ನ್(708) ನಂತರದ ಸ್ಥಾನದಲ್ಲಿ ಆಂಡರ್‌ಸನ್ ನೆಲೆಸಿದ್ದಾರೆ.

21 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಆಂಡರ್‌ಸನ್ ಇಂಗ್ಲೆಂಡ್ ಪರ ಆಡಿದ 188 ಟೆಸ್ಟ್ ಪಂದ್ಯಗಳಲ್ಲಿ 704 ವಿಕೆಟ್ ಕಬಳಿಸಿದ್ದಾರೆ. 32 ಬಾರಿ ಐದು ವಿಕೆಟ್ ಹಾಗೂ 3 ಬಾರಿ ಪಂದ್ಯದಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಟೆಸ್ಟ್‌ನಲ್ಲಿ 40 ಸಾವಿರಕ್ಕೂ ಅಧಿಕ ಎಸೆತಗಳನ್ನು ಮಾಡಿರುವ ಮೊದಲ ವೇಗಿ ಎನಿಸಿದ್ದಾರೆ. 2017ರಲ್ಲಿ ಒಂದೇ ವರ್ಷ 55 ವಿಕೆಟ್ ಪಡೆಯುವ ಮೂಲಕ ಆಂಡರ್‌ಸನ್ ಗಮನ ಸೆಳೆದಿದ್ದರು. 194 ಏಕದಿನ ಪಂದ್ಯಗಳಲ್ಲಿ 269 ವಿಕೆಟ್ ಪಡೆದಿದ್ದಾರೆ.