ಕ್ರೀಡೆ

ಗೆಲುವಿಗಾಗಿ ವಿಂಡೀಸ್​ -ಇಂಗ್ಲೆಂಡ್​ ರೋಚಕ ಹೋರಾಟ

ಸೌಥಾಂಪ್ಟನ್​: ಕರೊನಾ ವೈರಸ್​ ಭೀತಿ ನಡುವೆಯೂ 117 ದಿನಗಳ ಬಳಿಕ ಆರಂಭಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೊದಲ ಟೆಸ್ಟ್​ ಕದನವೇ ರೋಚಕತೆ ಕಾಯ್ದುಕೊಂಡಿದೆ. ದ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಚಾಂಪಿಯನ್​ ಆತಿಥೇಯ ಇಂಗ್ಲೆಂಡ್​ ಹಾಗೂ ಟಿ20 ವಿಶ್ವಚಾಂಪಿಯನ್​ ವೆಸ್ಟ್​ ಇಂಡೀಸ್​ ನಡುವಿನ ಕದನ ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಅಂತಿಮ ದಿನದಾಟದ ಚಹಾ ವಿರಾಮದ ವೇಳೆಗೆ 4 ವಿಕೆಟ್​ಗೆ 143 ಮೊತ್ತ ಪೇರಿಸಿರುವ ವೆಸ್ಟ್​ ಇಂಡೀಸ್​ ಜಯ ದಾಖಲಿಸಲು ಇನ್ನೂ 57 ರನ್​ ಅವಶ್ಯಕತೆ ಇದೆ.

ಆತಿಥೇಯ ತಂಡ ನೀಡಿದ 200 ರನ್​ ಸಾಧಾರಣ ಮೊತ್ತ ಬೆನ್ನಟ್ಟಿರುವ ಪ್ರವಾಸಿ ವೆಸ್ಟ್​ ಇಂಡೀಸ್​ ಜೋಫ್ರಾ ಆರ್ಚರ್​ (35ಕ್ಕೆ 3) ಮಾರಕ ದಾಳಿ ನಡುವೆಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಜಮೈರ್ನ್​ ಬ್ಲ್ಯಾಕ್ ವುಡ್  (65 ರನ್, 110ಎಸೆತ, 8ಬೌಂಡರಿ) ಹಾಗೂ ರೋಸ್ಟನ್​ ಚೇಸ್​ (37ರನ್​, 88 ಎಸೆತ, 1 ಬೌಂಡರಿ) ಜೋಡಿಯ ಸಮಯೋಚಿತ ಬ್ಯಾಟಿಂಗ್​ ಫಲವಾಗಿ ಪ್ರವಾಸಿ ವೆಸ್ಟ್​ ಇಂಡೀಸ್​ ತಂಡ ಗೆಲುವಿಗಾಗಿ ಹೋರಾಟ ಮುಂದುವರಿಸಿದೆ. 

ಚೇತರಿಕೆ ನೀಡಿದ ಬ್ಲ್ಯಾಕ್ ವುಡ್
 ಮೊದಲ ಇನಿಂಗ್ಸ್​ನಲ್ಲಿ ತವರು ವೆಸ್ಟ್​ ಇಂಡೀಸ್​ ಎದುರು ವಿಕೆಟ್​ ಕಬಳಿಸಲು ವಿಫಲರಾಗಿದ್ದ ಆರ್ಚರ್​ ಅಂತಿಮ ದಿನದಾಟದಲ್ಲಿ ಮಿಂಚಿನ ನಿರ್ವಹಣೆ ತೋರಿದರು. ಮೊದಲ ಇನಿಂಗ್ಸ್​ ಅರ್ಧಶತಕ ಸಾಧಕ ಕ್ರೇಗ್​ ಬ್ರಾಥ್​ವೇಟ್​ (4) ವಿಫಲರಾದರೆ, ಕ್ಯಾಂಪ್​ಬೆಲ್​ (1) ಕಣದಿಂದ ನಿವೃತ್ತಿ ಹೊಂದಿದರು. ಶೈ ಹೋಪ್ಸ್​ (9) ಹಾಗೂ ಬ್ರೂಕ್ಸ್​ (0) ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿಕೊಂಡರು. ಕೇವಲ 27 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡ ವಿಂಡೀಸ್​ ಆಘಾತ ಎದುರಿಸಿತು.

ಈ ವೇಳೆ ಜತೆಯಾದ ರೋಸ್ಟನ್​ ಚೇಸ್​ ಹಾಗೂ ಬ್ಲ್ಯಾಕ್ ವುಡ್ 5ನೇ ವಿಕೆಟ್​ಗೆ ಉಪಯುಕ್ತ 73 ರನ್​ ಪೇರಿಸಿತು. ಚೇಸ್​ ವಿಕೆಟ್​ ಕಬಳಿಸಿದ ಆರ್ಚರ್​ ವಿಂಡೀಸ್​ ತಂಡಕ್ಕೆ ಮತ್ತೊಮ್ಮೆ ಆಘಾತ ನೀಡಿದರು. ಬ್ಲ್ಯಾಕ್ ವುಡ್​ ಜತೆಯಾಗಿರುವ ಶೇನ್​ ಡೋವ್ರಿಚ್​ (15) ವಿಕೆಟ್​ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು 8 ವಿಕೆಟ್​ಗೆ 284 ರನ್​ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್​ 313 ರನ್​ಗಳಿಗೆ ಸರ್ವಪತನ ಕಂಡಿತು. ಶನ್ನೊನ್​ ಗ್ರ್ಯಾಬ್ರಿಯಲ್ 5 ವಿಕೆಟ್​ ಗೊಂಚಲು ಪಡೆದು ಮಿಂಚಿದರು. ಇಂಗ್ಲೆಂಡ್​ ಮೊದಲ ಇನಿಂಗ್ಸ್​ 204 ರನ್​ಗಳಿಸಿದ್ದರೆ, ವೆಸ್ಟ್​ ಇಂಡೀಸ್​ 318 ರನ್​ಗಳಿಸಿ 114 ರನ್​ ಮುನ್ನಡೆ ಸಾಧಿಸಿತ್ತು. ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್​ 313 ರನ್​ ಗಳಿಸಿತ್ತು.

ಇಂಗ್ಲೆಂಡ್​ : 204 ಮತ್ತು 313 (ಜೋಫ್ರಾ ಆರ್ಚರ್​ 23, ಗ್ರ್ಯಾಬ್ರಿಯಲ್ 75ಕ್ಕೆ 5, ರೋಸ್ಟನ್​ ಚೇಸ್​ 71ಕ್ಕೆ 2, ಅಲ್ಜಾರಿ ಜೋಸೆಫ್​ 45ಕ್ಕೆ 2), ವೆಸ್ಟ್​ ಇಂಡೀಸ್​: 318 ಮತ್ತು ದ್ವಿತೀಯ ಇನಿಂಗ್ಸ್​ ಅಂತಿಮ ದಿನದಾಟದ ಚಹಾ ವಿರಾಮದ ವೇಳೆಗೆ 4 ವಿಕೆಟ್​ಗೆ 143 (ಜಮೈರ್ನ್​ ಬ್ಲ್ಯಾಕ್ ವುಡ್ 65 ಬ್ಯಾಟಿಂಗ್, ರೋಸ್ಟನ್ ಚೇಸ್ 37, ಡೋವ್ರಿಚ್​ 15 ಬ್ಯಾಟಿಂಗ್, ಜೋಫ್ರಾ ಆರ್ಚರ್​ 35ಕ್ಕೆ 3, ಮಾರ್ಕ್​ ವುಡ್​ 22ಕ್ಕೆ 1).