ಸೌಥಾಂಪ್ಟನ್: ಆರಂಭಿಕ ಮೂರು ದಿನದಾಟದಲ್ಲಿ ಹಿನ್ನಡೆ ಅನುಭವಿಸಿದರೂ ಪುಟಿದೇಳಲು ಯಶಸ್ವಿಯಾದ ಏಕದಿನ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಎದುರು ಬಿಗಿ ಹಿಡಿತ ಸಾಧಿಸಿದ್ದು, ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ದ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 200 ರನ್ಗಳ ಸಾಧಾರಣ ಗೆಲುವಿನ ಮೊತ್ತ ಬೆನ್ನಟ್ಟಿರುವ ವೆಸ್ಟ್ ಇಂಡೀಸ್ ತಂಡ, ಜೋಫ್ರಾ ಆರ್ಚರ್ (13ಕ್ಕೆ 2) ದಾಳಿಗೆ ನಲುಗಿ ಭೋಜನ ವಿರಾಮದ ವೇಳೆಗೆ 3 ವಿಕೆಟ್ಗೆ 35 ಮೊತ್ತ ಪೇರಿಸಿದೆ. ವಿಂಡೀಸ್ ಜಯ ದಾಖಲಿಸಲು ಇನ್ನು 165 ರನ್ ಅವಶ್ಯಕತೆ ಯಿದೆ. ಮೊದಲ ಇನಿಂಗ್ಸ್ನಲ್ಲಿ ತವರು ವೆಸ್ಟ್ ಇಂಡೀಸ್ ಎದುರು ವಿಕೆಟ್ ಕಬಳಿಸಲು ವಿಫಲರಾಗಿದ್ದ ಆರ್ಚರ್ ಅಂತಿಮ ದಿನದಾಟದಲ್ಲಿ ಮಿಂಚನ ನಿರ್ವಹಣೆ ತೋರುತ್ತಿದ್ದಾರೆ. ಮೊದಲ ಇನಿಂಗ್ಸ್ ಅರ್ಧಶತಕ ಸಾಧಕ ಕ್ರೇಗ್ ಬ್ರಾಥ್ವೇಟ್ (4) ವಿಫಲರಾದರೆ, ಕ್ಯಾಂಪ್ಬೆಲ್ (1) ಕಣದಿಂದ ನಿವೃತ್ತಿ ಹೊಂದಿದರು. ಶೈ ಹೋಪ್ಸ್ (9) ಹಾಗೂ ಬ್ರೂಕ್ಸ್ (0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರೆ, ರೋಸ್ಟನ್ ಚೇಸ್ (12) ಹಾಗೂ ಬ್ಲ್ಯಾಕ್ವುಡ್ (1) ಕ್ರೀಸ್ನಲ್ಲಿದ್ದಾರೆ.
ಇದಕ್ಕೂ ಮೊದಲು 8 ವಿಕೆಟ್ಗೆ 284 ರನ್ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ 313 ರನ್ಗಳಿಗೆ ಸರ್ವಪತನ ಕಂಡಿತು. ಬಿರುಸಿನ ಬ್ಯಾಟಿಂಗ್ ಮೂಲಕವೂ ಜೋಫ್ರಾ ಆರ್ಚರ್ ಗಮನಸೆಳೆದರು. ಗ್ಯಾಬ್ರಿಯಲ್ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು. ಇಂಗ್ಲೆಂಡ್ ಮೊದಲ ಇನಿಂಗ್ಸ್ 204 ರನ್ಗಳಿಸಿದ್ದರೆ, ವೆಸ್ಟ್ ಇಂಡೀಸ್ 318 ರನ್ಗಳಿಸಿ 114 ರನ್ ಮುನ್ನಡೆ ಸಾಧಿಸಿತ್ತು. ದ್ವೀತಿಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ 313 ರನ್ ಗಳಿಸಿತ್ತು.
ಇಂಗ್ಲೆಂಡ್ : 204 ಮತ್ತು 313 (ಜೋಫ್ರಾ ಆರ್ಚರ್ 23, ಗ್ಯಾಬ್ರಿಯಲ್ 75ಕ್ಕೆ 5, ರೋಸ್ಟನ್ ಚೇಸ್ 71ಕ್ಕೆ 2, ಅಲ್ಜಾರಿ ಜೋಸೆಫ್ 45ಕ್ಕೆ 2), ವೆಸ್ಟ್ ಇಂಡೀಸ್: 318 ಮತ್ತು ದ್ವೀತಿಯ ಇನಿಂಗ್ಸ್ ಅಂತಿಮ ದಿನದಾಟದ ಭೋಜನ ವಿರಾಮದ ವೇಳೆಗೆ 3 ವಿಕೆಟ್ಗೆ 31 (ಜೋಫ್ರಾ ಆರ್ಚರ್ 13ಕ್ಕೆ 2, ಮಾರ್ಕ್ ವುಡ್ 4ಕ್ಕೆ 1).