ಕ್ರೀಡೆ

ಶಾನ್​ ಮಸೂದ್​ ಶತಕದಾಟ, ಪಾಕಿಸ್ತಾನ ಉತ್ತಮ ಮೊತ್ತ

ಮ್ಯಾಂಚೆಸ್ಟರ್​: ಇಂಗ್ಲೆಂಡ್​ ವೇಗಿಗಳ ಮಾರಕ ದಾಳಿ ನಡುವೆಯೂ ಆರಂಭಿಕ ಬ್ಯಾಟ್ಸ್​ಮನ್​ ಶಾನ್​ ಮಸೂದ್​ (151ರನ್​, 314 ಎಸೆತ, 17 ಬೌಂಡರಿ, 2 ಸಿಕ್ಸರ್​) ಶತಕದಾಟದ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಸಾಗಿದೆ. ಓಲ್ಡ್​ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 2 ವಿಕೆಟ್​ಗೆ 139 ರನ್​ಗಳಿಂದ ದಿನದಾಟ ಆರಂಭಿಸಿದ ಪಾಕಿಸ್ತಾನ ತಂಡ, ಗುರುವಾರದ ಚಹಾ ವಿರಾಮದ ವೇಳೆಗೆ 106 ಓವರ್​ಗಳಲ್ಲಿ 8 ವಿಕೆಟ್​ಗೆ 312 ರನ್​ ಪೇರಿಸಿದೆ.

46 ರನ್​ಗಳಿಂದ ಶಾನ್​ ಮಸೂದ್​ ಹಾಗೂ 69 ರನ್​ಗಳಿಂದ ದಿನದಾಟ ಆರಂಭಿಸಿದ ಬಾಬರ್​ ಅಜಮ್​ ಜೋಡಿಗೆ ದಿನದ ಮೊದಲ ಓವರ್​ನಲ್ಲೇ ಇಂಗ್ಲೆಂಡ್​ ವೇಗಿ ಜೇಮ್ಸ್​ ಆಂಡರ್​ಸನ್​ ಆಘಾತ ನೀಡಿದರು. ಮೊದಲ ದಿನದಾಟದಲ್ಲಿ ಅರ್ಧಶತಕ ಗಳಿಸಿದ್ದ ಭರವಸೆಯ ಬಾಬರ್​ ಅಜಮ್​ ಯಾವುದೇ ಮೊತ್ತ ಪೇರಿಸದೆ ನಿರ್ಗಮಿಸಿದರು, ಇದಾದ ಬಳಿಕ ಅಸಾದ್​ ಶಫೀಕ್​ (7) ಹಾಗೂ ಮೊಹಮದ್​ ರಿಜ್ವಾನ್​ (9) ಕ್ರಮವಾಗಿ ಸ್ಟುವರ್ಟ್​ ಬ್ರಾಡ್​ ಹಾಗೂ ಕ್ರಿಸ್​ ವೋಕ್ಸ್​ಗೆ ವಿಕೆಟ್​ ಒಪ್ಪಿಸಿದರು. ಒಂದೆಡೆ, ವಿಕೆಟ್​ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್​ ಕಾಯ್ದುಕೊಂಡ ಶಾನ್​ ಮಸೂದ್​, ಶಾಬಾದ್​ ಖಾನ್​ (45ರ್​, 76 ಎಸೆತ, 3 ಬೌಂಡರಿ) ಜತೆಗೂಡಿ 6ನೇ ವಿಕೆಟ್​ಗೆ 105 ರನ್​ ಜತೆಯಾಟವಾಡಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಈ ಜೋಡಿ ಆಸರೆಯಾಯಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಡೊಮಿನಿಕ್​ ಬೆಸ್​ ಯಶಸ್ವಿಯಾದರು. ಶಾದಾಬ್​ ನಿರ್ಗಮನದ ಬೆನ್ನಲ್ಲೇ ಯಾಸೀರ್​ ಷಾ (5), ಮೊಹಮದ್​ ಅಬ್ಬಾಸ್​ (0) ಬಂದಷ್ಟೇ ವೇಗವಾಗಿ ಪೆವಿಲಿಯನ್​ ವಾಪಸಾದರು.

ಪಾಕಿಸ್ತಾನ: ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ 106 ಓವರ್​ಗಳಲ್ಲಿ 8 ವಿಕೆಟ್​ಗೆ 312 (ಶಾನ್​ ಮಸೂದ್​ 151, ಬಾಬರ್​ ಅಜಮ್​ 69, ಶಾದಾಬ್​ ಖಾನ್​ 45, ಆಂಡರ್​ಸನ್​ 63ಕ್ಕೆ 1, ಬ್ರಾಡ್​ 51ಕ್ಕೆ 1, ಕ್ರಿಸ್​ ವೋಕ್ಸ್​ 43ಕ್ಕೆ 2, ಆರ್ಚರ್​ 43ಕ್ಕೆ 3).