ಕ್ರೀಡೆ

ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಮೂವರು ಕೋಚ್ ಸೇರ್ಪಡೆ

ಲಂಡನ್: ಕರೊನಾ ವೈರಸ್ ಭೀತಿಯ ನಡುವೆ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಜೈವಿಕ-ಸುರಕ್ಷಾ ವಾತಾವರಣದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗುತ್ತಿರುವ ಆತಿಥೇಯ ಇಂಗ್ಲೆಂಡ್, 30 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಜತೆಗೆ ಅವರಿಗೆ ಸೂಕ್ತ ಮಾರ್ಗದರ್ಶನದ ಮೂಲಕ ನೆರವಾಗಲು ಕೌಂಟಿ ಕ್ರಿಕೆಟ್‌ನಿಂದ ಮೂವರು ಕೋಚ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಲಂಕಾಶೈರ್, ಗ್ಲೌಸೆಸ್ಟರ್‌ಶೈರ್ ಮತ್ತು ಕೆಂಟ್ ತಂಡಗಳಿಂದ ಕ್ರಮವಾಗಿ ಗ್ಲೆನ್ ಚಾಪಲ್, ರಿಚರ್ಡ್ ಡಾಸನ್ ಮತ್ತು ಮ್ಯಾಥ್ಯೂ ವಾಲ್ಕರ್ ಅವರನ್ನು ಇಂಗ್ಲೆಂಡ್ ತಂಡಕ್ಕೆ ಕೋಚ್ ಆಗಿ ನೇಮಿಸಿಕೊಳ್ಳಲಾಗಿದ್ದು, ಮುಂದಿನ ಮಂಗಳವಾರದಿಂದ ಸೌಥಾಂಪ್ಟನ್‌ನ ಏಜಿಯಸ್ ಬೌಲ್‌ನಲ್ಲಿ ನಡೆಯಲಿರುವ ತರಬೇತಿ ಶಿಬಿರದಲ್ಲಿ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕ್ರಿಸ್ ಸಿಲ್ವರ್‌ವುಡ್ ತಂಡದ ಮುಖ್ಯ ಕೋಚ್ ಆಗಿರುತ್ತಾರೆ. ಜತೆಗೆ ಕ್ರಿಸ್ ರೀಡ್ ವಿಕೆಟ್ ಕೀಪಿಂಗ್ ಸಲಹೆಗಾರ ಮತ್ತು ಕಾರ್ಲ್ ಹಾಪ್ಕಿನ್‌ಸನ್ ಫೀಲ್ಡಿಂಗ್ ಕೋಚ್ ಆಗಿರುತ್ತಾರೆ.

3 ಪಂದ್ಯಗಳ ಟೆಸ್ಟ್ ಸರಣಿ ಜುಲೈ 8ರಂದು ಆರಂಭವಾಗಲಿದೆ. ಈಗಾಗಲೆ ಇಂಗ್ಲೆಂಡ್ ತಲುಪಿರುವ ವೆಸ್ಟ್ ಇಂಡೀಸ್ ತಂಡ ಸದ್ಯ 14 ದಿನಗಳ ಕ್ವಾರಂಟೈನ್‌ನಲ್ಲಿದೆ. ಇಂಗ್ಲೆಂಡ್ ತಂಡದ 30 ಆಟಗಾರರ ನಡುವೆ ಜುಲೈ 1ರಿಂದ ತ್ರಿದಿನ ಅಭ್ಯಾಸ ಪಂದ್ಯ ನಡೆಯಲಿದ್ದು, ಬಳಿಕ ಮೊದಲ ಟೆಸ್ಟ್ ಪಂದ್ಯಕ್ಕೆ ಅಂತಿಮ ತಂಡದ ಆಯ್ಕೆ ನಡೆಯಲಿದೆ. ಸರಣಿಯ 2 ಮತ್ತು 3ನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

ಇಂಗ್ಲೆಂಡ್ ತಂಡ: ಮೊಯಿನ್ ಅಲಿ, ಜೇಮ್ಸ್ ಆಂಡರ್‌ಸನ್, ಜೋಫ್ರಾ ಆರ್ಚರ್, ಜೊನಾಥನ್ ಬೇರ್‌ಸ್ಟೋ, ಡೊಮಿನಿಕ್ ಬೆಸ್, ಜೇಮ್ಸ್ ಬ್ರೇಸಿ, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್ ಕ್ರೌಲಿ, ಸ್ಯಾಮ್ ಕರ‌್ರನ್, ಜೋಯಿ ಡೆನ್ಲಿ, ಬೆನ್ ಫೋಕ್ಸ್, ಲೆವಿಸ್ ಗ್ರೆಗೋರಿ, ಕೀಟನ್ ಜೆನ್ನಿಂಗ್ಸ್, ಡಾನ್ ಲಾರೆನ್ಸ್, ಜಾಕ್ ಲೀಚ್, ಸಕಿಬ್ ಮೊಹಮೂದ್, ಕ್ರೇಗ್ ಓವರ್ಟನ್, ಜೇಮಿ ಓವರ್ಟನ್, ಮ್ಯಾಥ್ಯೂ ಪಾರ್ಕಿನ್‌ಸನ್, ಒಲಿ ಪೋಪ್, ಒಲಿ ರಾಬಿನ್‌ಸನ್, ಜೋ ರೂಟ್, ಡಾಮ್ ಸಿಬ್ಲೆ, ಬೆನ್ ಸ್ಟೋಕ್ಸ್, ಒಲಿ ಸ್ಟೋನ್, ಅಮರ್ ವಿರ್ಡಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.