ನವದೆಹಲಿ: ಆಸೀಸ್ ಪ್ರವಾಸದ ಬೆನ್ನಲ್ಲೇ ತವರಿನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡವನ್ನು ಮಂಗಳವಾರ ಆಯ್ಕೆ ಮಾಡಲಾಗುವುದು. ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಇಶಾಂತ್ ಶರ್ಮ ತಂಡಕ್ಕೆ ಮರಳುವುದು ನಿಶ್ಚಿತವೆನಿಸಿದ್ದು, ಫಿಟ್ನೆಸ್ ಸಮಸ್ಯೆಯಿಂದ ಬ್ರಿಸ್ಬೇನ್ ಟೆಸ್ಟ್ ತಪ್ಪಿಸಿಕೊಂಡ ಜಸ್‌ಪ್ರೀತ್ ಬುಮ್ರಾ ಮತ್ತು ಆರ್. ಅಶ್ವಿನ್ ಆಯ್ಕೆ ಬಗ್ಗೆ ಕುತೂಹಲವಿದೆ. ಫೆಬ್ರವರಿ 5ರಂದು ಚೆನ್ನೈನಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
ಜಸ್‌ಪ್ರೀತ್ ಬುಮ್ರಾ ಮತ್ತು ಅಶ್ವಿನ್ ಕ್ರಮವಾಗಿ ಹೊಟ್ಟೆಯ ಸೆಳೆತ ಮತ್ತು ಬೆನ್ನು ನೋವಿನಿಂದಾಗಿ ಬ್ರಿಸ್ಬೇನ್ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಇದೀಗ ತವರಿನಲ್ಲಿ ಟೆಸ್ಟ್ ಆಡಲು ಅವರು ಫಿಟ್ ಆಗುವರೇ ಎಂಬ ಪ್ರಶ್ನೆ ಮೂಡಿದೆ. ಸಂಜೆ 5 ಗಂಟೆಯ ವೇಳೆಗೆ ಸಭೆ ನಡೆಯಲಿದೆ. ಇನ್ನು ಮೊಹಮದ್ ಶಮಿ, ರವೀಂದ್ರ ಜಡೇಜಾ, ಉಮೇಶ್ ಯಾದವ್ ಮತ್ತು ಹನುಮ ವಿಹಾರಿ ಕೂಡ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯಗೊಂಡಿದ್ದು, ಈಗಾಗಲೆ ತವರಿಗೆ ಮರಳಿದ್ದಾರೆ. ಇವರೆಲ್ಲರೂ ಆಯ್ಕೆಗೆ ಅಲಭ್ಯರಾಗಿದ್ದಾರೆ.
ಚೇತನ್ ಶರ್ಮ ಸಾರಥ್ಯದ ನೂತನ ಆಯ್ಕೆ ಸಮಿತಿಯ ಮೊದಲ ಸಭೆ ಇದಾಗಿದ್ದು, ಹೆಚ್ಚಿನ ಬದಲಾವಣೆಯ ನಿರೀಕ್ಷೆ ಇಲ್ಲ. ಆಸೀಸ್ ಸರಣಿಯಲ್ಲಿ ಆಡಿರುವವ ಆಟಗಾರರಲ್ಲಿ ಫಿಟ್ ಆಗಿರುವ ಎಲ್ಲರೂ ಇಂಗ್ಲೆಂಡ್ ವಿರುದ್ಧ ಸರಣಿಗೂ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ.
ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡದ ಆಟಗಾರರೆಲ್ಲರೂ ಜನವರಿ 27ರಿಂದಲೇ ಬಯೋಬಬಲ್‌ಗೆ ಒಳಪಡಲಿದ್ದು, ನೆಟ್ ಬೌಲರ್‌ಗಳನ್ನು ಒಳಗೊಂಡಂತೆ 16ರಿಂದ 18 ಆಟಗಾರರ ತಂಡ ಆಯ್ಕೆಯಾಗುವ ನಿರೀಕ್ಷೆ ಇದೆ. ಸರಣಿಯ ಮೊದಲ ಎರಡೂ ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ಫೆಬ್ರವರಿ 5ರಿಂದ 9 ಮತ್ತು 13ರಿಂದ 17ರವರೆಗೆ ನಡೆಯಲಿವೆ. 3 ಮತ್ತು 4ನೇ ಪಂದ್ಯಗಳು ಅಹಮದಾಬಾದ್‌ನಲ್ಲಿ ಫೆಬ್ರವರಿ 24ರಿಂದ 28 ಮತ್ತು ಮಾರ್ಚ್ 4ರಿಂದ 8ರವರೆಗೆ ನಡೆಯಲಿವೆ. ಬಳಿಕ ಅಹಮದಾಬಾದ್‌ನಲ್ಲೇ 5 ಟಿ20 ಪಂದ್ಯಗಳ (ಮಾ. 12, 14, 16, 18, 20) ಸರಣಿ ಮತ್ತು ಪುಣೆಯಲ್ಲಿ 3 ಏಕದಿನ ಪಂದ್ಯಗಳ (ಮಾ. 23, 26, 28) ಸರಣಿ ನಡೆಯಲಿದೆ.
ಪೃಥ್ವಿ ಷಾ ಔಟ್, ಮಯಾಂಕ್ ಸೇಫ್?
ತಾಂತ್ರಿಕ ದೋಷದಿಂದ ಆಸೀಸ್ ಪ್ರವಾಸದಲ್ಲಿ ವೈಫಲ್ಯ ಅನುಭವಿಸಿರುವ ಆರಂಭಿಕ ಪೃಥ್ವಿ ಷಾ ತಂಡದಿಂದ ಹೊರಬೀಳುವುದು ಖಚಿತವೆನಿಸಿದೆ. ಅವರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಆಡಿ ಬ್ಯಾಟಿಂಗ್‌ನಲ್ಲಿರುವ ತಾಂತ್ರಿಕ ದೋಷ ಸರಿಪಡಿಸಿಕೊಳ್ಳಲು ಅವಕಾಶ ನೀಡಬಹುದು. ಮತ್ತೊಂದೆಡೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ಆಸೀಸ್ ಪ್ರವಾಸದ ರನ್‌ಬರದ ನಡುವೆಯೂ ಸ್ಥಾನ ಉಳಿಸಿಕೊಳ್ಳಬಹುದು. ಮತ್ತೋರ್ವ ಕನ್ನಡಿಗ ಕೆಎಲ್ ರಾಹುಲ್ ತಂಡಕ್ಕೆ ಮರಳಿದರಷ್ಟೇ ಮಯಾಂಕ್ ಸ್ಥಾನ ಕಳೆದುಕೊಳ್ಳಬಹುದು. ಆದರೆ, ಮಣಿಕಟ್ಟಿನ ಗಾಯದಿಂದಾಗಿ ಆಸೀಸ್ ಪ್ರವಾಸದಿಂದ ಅರ್ಧದಲ್ಲೇ ವಾಪಸಾಗಿರುವ ರಾಹುಲ್, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ. ಮಾರ್ಚ್‌ನಲ್ಲಿ ನಡೆಯಲಿರುವ ಸೀಮಿತ ಓವರ್ ಸರಣಿಗೆ ಸಿದ್ಧತೆ ನಡೆಸಲು ಅವರಿಗೆ ವಿಜಯ್ ಹಜಾರೆ/ರಣಜಿ ಟ್ರೋಫಿಯಲ್ಲಿ ಆಡುವ ಅವಕಾಶ ನೀಡುವ ಸಾಧ್ಯತೆ ಇದೆ.
ಜಡೇಜಾ ಜಾಗಕ್ಕೆ ನದೀಂ?
ಗಾಯದಿಂದ ಅಲಭ್ಯರಾಗಿರುವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ ಸ್ಥಾನವನ್ನು ಜಾರ್ಖಂಡ್ ಸ್ಪಿನ್ನರ್ ಶಾಬಾಜ್ ನದೀಂ ತುಂಬುವ ನಿರೀಕ್ಷೆ ಇದೆ. 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ನದೀಂ ಮತ್ತೆ ಅವಕಾಶ ಪಡೆಯಬಹುದು. ನೆಟ್ ಬೌಲರ್ ಆಗಿ ತಂಡದಲ್ಲಿದ್ದು, ಅಶ್ವಿನ್ ಗಾಯಗೊಂಡಾಗ ಟೆಸ್ಟ್ ಪದಾರ್ಪಣೆಯ ಅವಕಾಶವನ್ನೂ ಪಡೆದ ವಾಷಿಂಗ್ಟನ್ ಸುಂದರ್ ಬ್ರಿಸ್ಬೇನ್‌ನಲ್ಲಿ ತೋರಿದ ಸರ್ವಾಂಗೀಣ ನಿರ್ವಹಣೆಯ ಬಳಿಕ ಆಲ್ರೌಂಡರ್ ಸ್ಥಾನಕ್ಕೆ ನೆಚ್ಚಿನ ಆಯ್ಕೆ ಎನಿಸಿದ್ದಾರೆ.
ಸಂಭಾವ್ಯ ತಂಡ:
ಆರಂಭಿಕರು: ಶುಭಮಾನ್ ಗಿಲ್, ರೋಹಿತ್ ಶರ್ಮ, ಮಯಾಂಕ್ ಅಗರ್ವಾಲ್.
ಮಧ್ಯಮ ಕ್ರಮಾಂಕ: ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ).
ವಿಕೆಟ್ ಕೀಪರ್: ರಿಷಭ್ ಪಂತ್, ವೃದ್ಧಿಮಾನ್ ಸಾಹ.
ಆಲ್ರೌಂಡರ್: ವಾಷಿಂಗ್ಟನ್ ಸುಂದರ್.
ವೇಗಿಗಳು: ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಶಾರ್ದೂಲ್ ಠಾಕೂರ್, ಮೊಹಮದ್ ಸಿರಾಜ್, ಟಿ. ನಟರಾಜನ್.
ಸ್ಪಿನ್ನರ್: ಆರ್. ಅಶ್ವಿನ್, ಶಾಬಾಜ್ ನದೀಂ, ಕುಲದೀಪ್ ಯಾದವ್.