ಕ್ರೀಡೆ

ಆಸೀಸ್ ಮಹಿಳಾ ಕ್ರಿಕೆಟರ್ ಎಲ್ಲಿಸ್ ಪೆರ್ರಿ ವಿಚ್ಛೇದನ, ಕ್ರೀಡಾ ದಂಪತಿ ಬಾಳಲ್ಲಿ ಬಿರುಕು!

ಮೆಲ್ಬೋರ್ನ್: ಕ್ರೀಡಾ ವೃತ್ತಿಜೀವನದ ಸವಾಲು, ಕಷ್ಟಗಳನ್ನು ಪರಸ್ಪರ ಅರ್ಥ ಮಾಡಿಕೊಂಡ ಕ್ರೀಡಾಪಟುಗಳೇ ಸತಿ-ಪತಿಗಳಾದರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಆಸ್ಟ್ರೇಲಿಯಾದ ಸ್ಟಾರ್ ಕ್ರೀಡಾ ದಂಪತಿ ಈ ನಂಬಿಕೆಯನ್ನು ಸುಳ್ಳಾಗಿಸಿದೆ. ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಮತ್ತು ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಅವರ 5 ವರ್ಷಗಳ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ.

ಪರಸ್ಪರ ದೂರವಾಗುತ್ತಿರುವ ಬಗ್ಗೆ ಎಲ್ಲಿಸ್ ಪೆರ್ರಿ ಮತ್ತು ಮ್ಯಾಟ್ ಟೂಮುವಾ ಭಾನುವಾರ ಜಂಟಿ ಪ್ರಕಟಣೆ ಬಿಡುಗಡೆ ಮಾಡಿದ್ದು,'ಪರಸ್ಪರ ಗೌರವದೊಂದಿಗೆ ನಾವಿಬ್ಬರು ಈ ವರ್ಷ ದೂರವಾಗಲು ನಿರ್ಧರಿಸಿದ್ದೆವು. ಇಬ್ಬರ ಜೀವನದ ಹಿತದೃಷ್ಟಿಯಿಂದ ಇದೊಂದು ಸರಿಯಾದ ನಿರ್ಧಾರ ಎಂದು ನಂಬಿದ್ದೇವೆ. ನಮ್ಮಿಬ್ಬರ ಸಂಬಂಧದ ಬಗ್ಗೆ ಖಾಸಗಿತನ ಕಾಯ್ದುಕೊಂಡಿದ್ದೆವು ಮತ್ತು ಮುಂದೆಯೂ ನಮ್ಮ ಖಾಸಗಿತನಕ್ಕೆ ಗೌರವ ಸಿಗಬೇಕೆಂದು ಕೇಳಿಕೊಳ್ಳುತ್ತೇವೆ'ಎಂದು ತಿಳಿಸಿದ್ದಾರೆ.

2012ರಲ್ಲಿ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಪೆರ್ರಿ ಮತ್ತು ಟೂಮುವಾ, 2013ರಿಂದ ಬಹಿರಂಗವಾಗಿ ಡೇಟಿಂಗ್ ಆರಂಭಿಸಿದ್ದರು. ಅದರ ಬೆನ್ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2015ರ ಡಿಸೆಂಬರ್​ನಲ್ಲಿ ಸಿಡ್ನಿಯಲ್ಲಿ ವಿವಾಹವಾಗಿದ್ದರು. ಬಳಿಕ ಮೆಲ್ಬೋರ್ನ್ ರೆಬೆಲ್ಸ್​ ಸೂಪರ್ ರಗ್ಬಿ ಕ್ಲಬ್ ಆಟಗಾರ ಟೂಮುವಾ ಜತೆಗಿರುವ ಸಲುವಾಗಿ ಪೆರ್ರಿ ಕೂಡ ಸಿಡ್ನಿಯಿಂದ ಮೆಲ್ಬೋರ್ನ್​ಗೆ ವಾಸ್ತವ್ಯ ಬದಲಾಯಿಸಿಕೊಂಡಿದ್ದರು.

ಇದನ್ನೂ ಓದಿ: ತಂದೆಯಾದ ಆಸೀಸ್​ ಕ್ರಿಕೆಟಿಗ ಉಸ್ಮಾನ್​ ಖವಾಜ

ಕಳೆದ ಫೆಬ್ರವರಿಯಲ್ಲೇ ಅನುಮಾನ ಮೂಡಿತ್ತು
ಪೆರ್ರಿ-ಟೂಮುವಾ ದಾಂಪತ್ಯ ಜೀವನದಲ್ಲಿ ಏನೋ ಸರಿಯಿಲ್ಲ ಎಂಬ ಅನುಮಾನ ಕಳೆದ ಫೆಬ್ರವರಿಯಲ್ಲೇ ಎಲ್ಲರಿಗೂ ಮೂಡಿತ್ತು. ಮೆಲ್ಬೋರ್ನ್​ನಲ್ಲಿ ನಡೆದ ಆಸ್ಟ್ರೇಲಿಯನ್ ಕ್ರಿಕೆಟ್ ಪ್ರಶಸ್ತಿ ಸಮಾರಂಭಕ್ಕೆ 29 ವರ್ಷದ ಪೆರ್ರಿ ವೆಡ್ಡಿಂಗ್ ರಿಂಗ್ ಇಲ್ಲದೆ ಬಂದಿದ್ದು ಇದಕ್ಕೆ ಕಾರಣವಾಗಿತ್ತು. ಅಲ್ಲದೆ ಸಮಾರಂಭದಲ್ಲಿ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಧನ್ಯವಾದ ಹೇಳುವ ಸಮಯದಲ್ಲಿ ಪೆರ್ರಿ, ಟೂಮುವಾ ಹೆಸರನ್ನು ಉಲ್ಲೇಖಿಸಿರಲಿಲ್ಲ. ಆದರೆ ತಮ್ಮ ನಡುವೆ ಬಿರುಕು ಮೂಡಿರುವುದನ್ನು ಪೆರ್ರಿ ಮತ್ತು ಟೂಮುವಾ ಇಬ್ಬರೂ ನಿರಾಕರಿಸುತ್ತ ಬಂದಿದ್ದರು.



ಇಬ್ಬರ ಕ್ರೀಡಾ ಜೀವನವೂ ಈಗ ಉತ್ತಮ ರೀತಿಯಲ್ಲೇ ಸಾಗುತ್ತಿದ್ದು, ಇಬ್ಬರೂ ಯಶಸ್ವಿ ಕ್ರೀಡಾಪಟುಗಳೆನಿಸಿದ್ದಾರೆ. ಮ್ಯಾಟ್ ಟೂಮುವಾ ಕಳೆದ ಶುಕ್ರವಾರವಷ್ಟೇ ತಮ್ಮ ರಗ್ಬಿ ಕ್ಲಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಮತ್ತೊಂದೆಡೆ ಪೆರ್ರಿ ಕೂಡ ಆಸೀಸ್ ತಂಡದ ಪ್ರಧಾನ ಆಟಗಾರ್ತಿಯಾಗಿದ್ದು, ಕಳೆದ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಗಮನ ಸೆಳೆದಿದ್ದರು. ಆದರೆ ಗಾಯದಿಂದಾಗಿ ಅವರಿಗೆ ಫೈನಲ್​ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಕಾಲಿನ ಶಸ್ತ್ರಚಿಕಿತ್ಸೆಗೂ ಒಳಗಾಗಿರುವ ಅವರು ಕಳೆದ ಮಾರ್ಚ್​ನಿಂದ 6 ತಿಂಗಳ ವಿಶ್ರಾಂತಿಯಲ್ಲಿದ್ದಾರೆ. ಅವರು ಆಸೀಸ್ ಪರ 112 ಏಕದಿನ, 120 ಟಿ20 ಪಂದ್ಯಗಳನ್ನು ಆಡಿದ್ದಾರೆ. 8 ಟೆಸ್ಟ್ ಪಂದ್ಯಗಳನ್ನೂ ಆಡಿದ್ದು, ಒಟ್ಟಾರೆ 297 ವಿಕೆಟ್ ಮತ್ತು 4,864 ರನ್ ಗಳಿಸಿದ್ದಾರೆ.