ನವದೆಹಲಿ: ಪ್ರತಿ ಬಾರಿ ಐಪಿಎಲ್ ಸಮಯದಲ್ಲಿ ಆರ್‌ಸಿಬಿ ಅಭಿಮಾನಿಗಳು ‘ಈ ಸಲ ಕಪ್ ನಮ್ದೇ’ ಎಂದು ಹೇಳುವುದು ಸಾಮಾನ್ಯ. ಆದರೆ ಈ ಬಾರಿ ಐಪಿಎಲ್ 14ನೇ ಆವೃತ್ತಿಯ ಪುನರಾರಂಭದ ಸಮಯ ಹತ್ತಿರ ಬರುತ್ತಿದ್ದಂತೆ ಬರೀ ಕರ್ನಾಟಕ ಅಥವಾ ಭಾರತ ಮಾತ್ರವಲ್ಲದೆ ದೂರದ ಇಂಗ್ಲೆಂಡ್‌ನಲ್ಲಿರುವ ಆರ್‌ಸಿಬಿ ಅಭಿಮಾನಿಯಿಂದಲೂ ‘ಈ ಸಲ ಕಪ್ ನಮ್ದೇ’ ಎನ್ನುವ ಮಾತು ಕೇಳಿಬಂದಿದೆ!
ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ನರ್ ಅಲೆಕ್ಸಾಂಡ್ರಾ ಹಾರ್ಟ್ಲಿ ಆರ್‌ಸಿಬಿ ತಂಡದ ದೊಡ್ಡ ಅಭಿಮಾನಿಯಾಗಿದ್ದಾರೆ. ಹೀಗಾಗಿ ಅವರು, ಆರ್‌ಸಿಬಿ ಪುನರಾರಂಭವನ್ನು ಕಾಯುತ್ತಿರುವೆ ಎಂಬ ಟ್ವೀಟ್ ಜತೆಗೆ, ‘ಈ ಸಲ ಕಪ್ ನಮ್ದೇ’ ಎಂಬ ಕನ್ನಡದ ಸಾಲನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ.
ಅವರು ಕಳೆದ ವರ್ಷವೂ ಆರ್‌ಸಿಬಿ ಪರ ಟ್ವೀಟ್ ಮಾಡಿದ್ದಕ್ಕೆ ಪ್ರತಿಯಾಗಿ ಟೀಮ್ ಮ್ಯಾನೇಜ್‌ಮೆಂಟ್ ಆರ್‌ಸಿಬಿ ಜೆರ್ಸಿಯನ್ನು ಉಡುಗೊರೆ ನೀಡಿತ್ತು. 27 ವರ್ಷದ ಹಾರ್ಟ್ಲಿ ಇಂಗ್ಲೆಂಡ್ ಪರ 28 ಏಕದಿನ, 4 ಟಿ20 ಪಂದ್ಯವಾಡಿದ್ದು, ಒಟ್ಟು 42 ವಿಕೆಟ್ ಕಬಳಿಸಿದ್ದಾರೆ. ಆರ್‌ಸಿಬಿ ತಂಡ ಐಪಿಎಲ್ ಮೊದಲ ಭಾಗದಲ್ಲಿ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ನೆಲೆಸಿದೆ.