ಕ್ರೀಡೆ

ಸಂಪಾದಕೀಯ; ತರಾತುರಿ ಪರಿಣಾಮ

ಸುದೀಪ್​ ವಿ.ಎನ್​

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಐಪಿಎಲ್ ಚ್ಯಾಂಪಿಯನ್ ಆಗಿ ಹೊಮ್ಮಿ, ಕಪ್ ತನ್ನದಾಗಿಸಿಕೊಂಡ ಸಂಭ್ರಮ ಕೆಲವೇ ಗಂಟೆಗಳಲ್ಲಿ ಶೋಕವಾಗಿ ಮಾರ್ಪಟ್ಟ ಘಟನೆ ನಿಜಕ್ಕೂ ವಿಪರ್ಯಾಸ. ಮಂಗಳವಾರ ರಾತ್ರಿ ಸಂಭ್ರಮದಲ್ಲಿ ಮುಳುಗಿದ್ದ ಬೆಂಗಳೂರು ಬುಧವಾರ ಶೋಕತಪ್ತವಾಯಿತು. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಹನ್ನೊಂದು ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಂಭ್ರಮ ಆಚರಿಸಲು, ತಮ್ಮ ಮೆಚ್ಚಿನ ಕ್ರಿಕೆಟ್ ತಾರೆಗಳನ್ನು ನೋಡಲು ಬಂದಿದ್ದ ಈ ಕ್ರಿಕೆಟ್ ಪ್ರೇಮಿಗಳ ದಾರುಣ ಸಾವಿಗೆ ಯಾರು ಹೊಣೆ? ಇಂಥದ್ದೊಂದು ದುರಂತವನ್ನು ತಡೆಯಲು ಎಲ್ಲ ಸಾಧ್ಯತೆಗಳಿದ್ದರೂ. ಸಿದ್ಧತೆಯ ಕೊರತೆಯಿಂದ ಆಗಬಾರದ ಘಟನೆ ನಡೆದು ಹೋಗಿದೆ. ಬೆಂಗಳೂರಿನ ಬ್ರಾ್ಯಂಡ್​ಗೂ ವಿಷಾದದ ಛಾಯೆ ತಟ್ಟಿದೆ.

ಮಂಗಳವಾರ ಮಧ್ಯರಾತ್ರಿಯೇ ಆರ್​ಸಿಬಿ ಅಭಿಮಾನಿಗಳು ರಸ್ತೆಗಳಿಗೆ ಇಳಿದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರು. ಹೀಗಾಗಿ, ಬುಧವಾರ ಆರ್​ಸಿಬಿ ತಂಡದ ಸ್ವಾಗತಕ್ಕೆ ಸಾವಿರಾರು ಜನರು ಸೇರುತ್ತಾರೆ ಎಂಬ ಅಂದಾಜು ಇದ್ದೇ ಇತ್ತು. ಆದರೆ, ಇದನ್ನು ಗ್ರಹಿಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿಫಲವಾಯಿತೆ? ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯದ ವೇಳೆ 1 ಲಕ್ಷಕ್ಕೂ ಹೆಚ್ಚು ಜನ ವೀಕ್ಷಕರು ಉಪಸ್ಥಿತರಿದ್ದರು. ಮೈದಾನದ ಹೊರಗಡೆಯೂ 50 ಸಾವಿರಕ್ಕಿಂತ ಅಧಿಕ ಜನರು ಸೇರಿದ್ದರು. ಆದರೆ, ಅಲ್ಲಿ ಸುವ್ಯವಸ್ಥೆಯ ನಿಯೋಜನೆಯಿಂದ ಯಾವುದೇ ಸಮಸ್ಯೆ ಆಗಲಿಲ್ಲ. ಭಾರತ ತಂಡ ಟಿ20 ವಿಶ್ವಕಪ್ ಗೆದ್ದ ಬಳಿಕ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಆಗಿನ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದಲ್ಲಿ ವಿಜಯಯಾತ್ರೆ ನಿಮಿತ್ತ ಬೃಹತ್ ಮೆರವಣಿಗೆ ನಡೆದಿತ್ತು. ಹಲವು ಕಿಲೋಮೀಟರ್​ಗಳವರೆಗೆ ಮೆರವಣಿಗೆ ಸಾಗಿದರೂ ಎಲ್ಲೂ ಗೊಂದಲ ಏರ್ಪಡಲಿಲ್ಲ.

ಇಷ್ಟೆಲ್ಲ ಸುವ್ಯವಸ್ಥೆಯ ನಿದರ್ಶನಗಳು ಇರುವಾಗಲೂ ಕರ್ನಾಟಕ ಸರ್ಕಾರ ಏಕೆ ಎಡವಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲದೆ, ತೀರಾ ತರಾತುರಿಯಲ್ಲಿ ಸಮಾರಂಭ ಏರ್ಪಡಿಸುವ ಅಗತ್ಯವೂ ಇರಲಿಲ್ಲ. ಏಕೆಂದರೆ, ಜನರ ಜೀವ, ಸುರಕ್ಷತೆ ಎಲ್ಲಕ್ಕಿಂತ ಮುಖ್ಯ. ಸೂಕ್ತ ಸಿದ್ಧತೆಯನ್ನು ಮಾಡಿಕೊಂಡು, ಹೆಚ್ಚು ಜನರು ಒಂದೆಡೆ ಸೇರುವಂಥ ಸ್ಥಳವನ್ನು ನಿಗದಿ ಮಾಡಿ ಕೆಲ ದಿನಗಳ ನಂತರ ಕಾರ್ಯಕ್ರಮ ಮಾಡಿದ್ದರೆ ಇಂಥ ಅನಾಹುತವೇ ಸಂಭವಿಸುತ್ತಿರಲಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲೂ ವ್ಯಾಪಕವಾಗಿ ಕೇಳಿಬರುತ್ತಿವೆ.ಅದೇನೆ ಇದ್ದರೂ ವ್ಯವಸ್ಥೆಯ ಘೋರ ವೈಫಲ್ಯದಿಂದ, ಯಾವುದೇ ಸೂಕ್ತ ಸಿದ್ಧತೆ ಮಾಡಿಕೊಳ್ಳದೆ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಮಹಾ ದುರಂತವೇ ಸಂಭವಿಸಿ, ಬೆಂಗಳೂರಿನ ಪಾಲಿಗೆ ಶಾಶ್ವತ ಕಹಿನೆನಪಾಗಿ ಕಾಡಲಿದೆ. ಮೃತಪಟ್ಟವರ ಕುಟುಂಬಗಳು ಅನುಭವಿಸಿರುವ ನಷ್ಟವಂತೂ ಹೇಳತೀರದು. ಇನ್ನಾದರೂ, ಸರ್ಕಾರ ಮತ್ತು ಸಂಬಂಧಪಟ್ಟ ವ್ಯವಸ್ಥೆ ಸಂವೇದನೆಯಿಂದ ವರ್ತಿಸಬೇಕು. ಮೃತಪಟ್ಟ 11 ಜನರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಿ, ಆತ್ಮಸ್ಥೈರ್ಯ ತುಂಬಬೇಕು. ಈ ದುರ್ಘಟನೆಗೆ ಕಾರಣವಾದ, ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ ಯಾರೇ ಆಗಿರಲಿ ಅವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು.