ನವದೆಹಲಿ: ಅವಳಿ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತೆ ಅಥ್ಲೀಟ್ ದ್ಯುತಿ ಚಂದ್ ಡೋಪಿಂಗ್ ಪರೀಕ್ಷೆಗಳಲ್ಲಿ ಸಿಕ್ಕಿಬಿದ್ದಿರುವುದರಿಂದ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) 4 ವರ್ಷಗಳ ನಿಷೇಧ ಹೇರಿದೆ. ಆದರೆ ಇದು ಉದ್ದೇಶ ಪೂರ್ವಕವಲ್ಲದ ಸೇವನೆಯಾಗಿದ್ದು, ಇದಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ದ್ಯುತಿ ಚಂದ್ ಸಲಹೆಗಾರ ಪಾರ್ಥ ಗೋಸ್ವಾಮಿ ಶುಕ್ರವಾರ ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ 5 ಮತ್ತು 26ರಂದು ಸಂಗ್ರಹಿಸಲಾಗಿದ್ದ ರಕ್ತದ ಮಾದರಿಯಲ್ಲಿ 2023ರ ನಿಷೇಧಿತ ಪಟ್ಟಿಯ ಅಡಿಯಲ್ಲಿ ಪಟ್ಟಿ ಮಾಡಲಾಗಿರುವ, ಗಾಯವನ್ನು ಗುಣಪಡಿಸಲು ಬಳಸುವ ನಿಷೇಧಿತ ಅನಾಬೋಲಿಕ್, ಆಂಡ್ರೋಜನ್ ರಿಸೆಪ್ಟರ್ ಸ್ಟಿರಾಯ್ಡಿ ಅಂಶ ಪತ್ತೆಯಾಗಿದೆ. ಆದ್ದರಿಂದ ಜ. 3ರಿಂದ ಪೂರ್ವಾನ್ವಯವಾಗುವಂತೆ ನಿಷೇಧ ಹೇರಲಾಗಿದೆ. ಅಲ್ಲದೆ ಡಿಸೆಂಬರ್‌ನಿಂದಲೇ ಭಾಗವಹಿಸಿದ ಸ್ಪರ್ಧೆಗಳ ಲಿತಾಂಶ ರದ್ದುಗೊಳಿಸಲಾಗಿದೆ.
2021ರಲ್ಲಿ ತೀವ್ರವಾದ ತೊಡೆಸಂದು ನೋವು ಹೊಂದಿದ್ದ 27 ವರ್ಷದ ದ್ಯುತಿ ಚಂದ್, ಫಿಸಿಯೋಥೆರಪಿಸ್ಟ್ ಸಲಹೆ ಮೇರೆಗೆ ಕೆಲವು ಔಷಧಗಳನ್ನು ಬಳಸಿದ್ದಾರೆ. ಆದರೆ ಔಷಧಗಳನ್ನು ಖರೀದಿಸುವ ಕೆಲಸವನ್ನು ತನ್ನ ಸ್ನೇಹಿತನಿಗೆ ವಹಿಸಿದ್ದರು ಎಂದು ದ್ಯುತಿ ಪರ ವಕೀಲರು ಪ್ರತಿಪಾದಿಸಿದ್ದಾರೆ.
ನಾಡಾ ನೀತಿ ಸಂಹಿತೆಯ ಆರ್ಟಿಕಲ್ 10.2.1.1 ನಿಯಮ ಉಲ್ಲಂಸಿರುವ ದ್ಯುತಿ ಚಂದ್, 2018ರಲ್ಲಿ ಜರ್ಕಾತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 100 ಮತ್ತು 200 ಮೀ ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದು, 100 ಮೀ.(2021) ಓಟದಲ್ಲಿ 11.17 ಸೆಕೆಂಡ್‌ನ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.
ವಿಶ್ವ ಅಥ್ಲೆಟಿಕ್ಸೃ್ ಆಡಳಿತ ಮಂಡಳಿಯ ನೀತಿಯ ಪ್ರಕಾರ ಹೈಪರ್ ಆಂಡ್ರೊಜೆನಿಸಂ ಅಥವಾ ಮಹಿಳೆಯರಲ್ಲಿ ಹೆಚ್ಚಿನ ನೈಸರ್ಗಿಕ ಮಟ್ಟದ ಟೆಸ್ಟೋಸ್ಟೆರಾನ್ ಹೊಂದಿರುವುದರಿಂದ ದ್ಯುತಿ ಚಂದ್ ಮಹಿಳಾ ಅಥ್ಲೀಟ್ ಆಗಿ ಸ್ಪರ್ಧಿಸಲು ಅನರ್ಹ ಎಂದು 2014ರ ಕಾಮನ್ವೆಲ್ತ್ ಗೇಮ್ಸ್‌ನ ಭಾರತ ತಂಡದಿಂದ ಹೊರಗಿಡಲಾಗಿತ್ತು. ಬಳಿಕ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್(ಸಿಎಎಸ್)ನಲ್ಲಿ ಮೇಲ್ಮನವಿ ಸಲ್ಲಿಸಿ ಗೆಲುವು ಸಾಧಿಸಿದ್ದರು.