ಪುಣೆ: ಭಾರತ-ಕಿವೀಸ್ 2ನೇ ಟೆಸ್ಟ್ ನಡುವೆ ಎಂಸಿಎ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕುಡಿಯುವ ನೀರಿಗಾಗಿ ಪರದಾಡಿದರು. ಮೊದಲ ದಿನದಾಟಕ್ಕೆ ಸುಮಾರು 18 ಸಾವಿರ ಪ್ರೇಕ್ಷಕರು ಹಾಜರಾಗಿದ್ದರು. ಆದರೆ ಸ್ಟೇಡಿಯಂಗೆ ನೀರಿನ ಬಾಟಲಿಗಳು ಸರಿಯಾಗಿ ಪೂರೈಕೆಯಾಗಿರಲಿಲ್ಲ. ಇದರಿಂದಾಗಿ ಭಾರಿ ಬಿಸಿಲಿನ ನಡುವೆ ಪ್ರೇಕ್ಷಕರು ಭೋಜನ ವಿರಾಮದ ವೇಳೆಗೆ ಬಾಯಾರಿಕೆ ಆದಾಗ ಸಾಕಷ್ಟು ನೀರು ಸಿಗದೆ ಬಳಲಿದರು.
ಇದರ ಲಾಭವೆತ್ತಲು ಯತ್ನಿಸಿದ ಕೆಲ ಮಾರಾಟಗಾರರು, ಇದ್ದ ಅಲ್ಪಸ್ವಲ್ಪ ನೀರನ್ನು 100 ಎಂಎಲ್ಗೆ 80 ರೂ.ನಂತೆ ಮಾರಾಟ ಮಾಡಿ ಕ್ರಿಕೆಟ್ ಪ್ರೇಮಿಗಳನ್ನು ದೋಚಿದರು. ನಾಲ್ವರು ಹಿರಿಯ ನಾಗರಿಕರು ಡಿಹೈಡ್ರೇಷನ್ನಿಂದ ಅಸ್ವಸ್ಥರಾದರು. ಇದರಿಂದ ಸಿಟ್ಟಿಗೆದ್ದ ಪ್ರೇಕ್ಷಕರು ಆತಿಥೇಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಇದರ ಬೆನ್ನಲ್ಲೇ ಸಾಕಷ್ಟು ನೀರಿನ ಪೂರೈಕೆ ಮಾಡಿದ ಎಂಸಿಎ, ಪ್ರೇಕ್ಷಕರ ಬಳಿ ಕ್ಷಮೆಯಾಚಿಸಿತು. ಚಹಾ ವಿರಾಮದ ವೇಳೆ ಸ್ಟೇಡಿಯಂನಲ್ಲಿ ನೀರಿನ ಸಮಸ್ಯೆ ಬಗೆಹರಿದಿತ್ತು. ಸ್ಟೇಡಿಯಂ ಪುಣೆ ನಗರದಿಂದ ಹೊರವಲಯದಲ್ಲಿದ್ದು, ಬೆಳಗ್ಗೆ ಭಾರಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದರಿಂದ ನೀರಿನ ಬಾಟಲಿಗಳನ್ನು ಹೊತ್ತ ವಾಹನಗಳು ಸ್ಟೇಡಿಯಂ ತಲುಪುವುದು ವಿಳಂಬವಾಯಿತು. ಹೀಗಾಗಿ ನೀರಿನ ಕೊರತೆ ಎದುರಾಗಿತ್ತು ಎನ್ನಲಾಗಿದೆ.