ಮುಂಬೈ: ಸೆಪ್ಟೆಂಬರ್ 5 ರಂದು ಆರಂಭವಾಗಲಿರುವ ದೇಶೀಯ ಟೂರ್ನಿ ದುಲೀಪ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಕಣಕ್ಕಿಳಿಯಲಿರುವ ತಂಡಗಳಲ್ಲಿ ಬಿಸಿಸಿಐ ಕೆಲ ಬದಲಾವಣೆ ಮಾಡಿದ್ದು, ಪರಿಷ್ಕೃತ ತಂಡ ಪ್ರಕಟಿಸಿದೆ. ಅನಾರೋಗ್ಯದಿಂದ ಬಳಲುತ್ತಿರುವ ಮೊಹಮದ್ ಸಿರಾಜ್ ಹಾಗೂ ಉಮ್ರಾನ್ ಮಲಿಕ್‌ಗೆ ಆರಂಭಿಕ ಪಂದ್ಯದಿಂದ ಕೈಬಿಡಲಾಗಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಟೂರ್ನಿಯಿಂದ ಬಿಡುಗಡೆ ಮಾಡಲಾಗಿದೆ.
ಎರಡು ಪಂದ್ಯಗಳು ಒಳಗೊಂಡಿರುವ ಮೊದಲ ಸುತ್ತು ಸೆಪ್ಟೆಂಬರ್ 5-8 ರವರೆಗೆ ನಡೆಯಲಿದ್ದು,
ಭಾರತ ಬಿ ತಂಡದಲ್ಲಿ ಸ್ಥಾನ ಪಡೆದಿದ್ದ ರವೀಂದ್ರ ಜಡೇಜಾ, ಟಿ20 ವಿಶ್ವಕಪ್ ಬಳಿಕ ಬ್ರೇಕ್ ಪಡೆದುಕೊಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಒಂದು ಪಂದ್ಯದಲ್ಲಿ ಭಾರತ ಎ ತಂಡ ಬಿ ತಂಡವನ್ನು ಎದುರಿಸಿದರೆ, ಆನಂತಪುರದಲ್ಲಿ ಭಾರತ ಸಿ ತಂಡ ವಿರುದ್ಧ ಭಾರತ ಡಿ ತಂಡ ಕಣಕ್ಕಿಳಿಯಲಿದೆ. ಶ್ರೀಲಂಕಾ ವಿರುದ್ಧ ಸೀಮಿತ ಸರಣಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸಿರಾಜ್, ಉಮ್ರಾನ್ ಮಲಿಕ್ ಇಬ್ಬರೂ ಅನಾರೋಗ್ಯಕ್ಕೆ ತುತ್ತಾಗಿದ್ದು, ಮೊದಲ ಸುತ್ತಿನ ಪಂದ್ಯಕ್ಕೆ ಫಿಟ್ ಆಗುವುದು ಅನುಮಾನ ಎನಿಸಿದೆ. ಅವರ ಬದಲಿಗೆ ಕ್ರಮವಾಗಿ ನವದೀಪ್ ಸೈನಿ ಮತ್ತು ಗೌರವ್ ಯಾದವ್ ಸ್ಥಾನ ಪಡೆದಿದ್ದಾರೆ.ಮಧ್ಯಪ್ರದೇಶದ 32 ವರ್ಷದ ಗೌರವ್ ಕಳೆದ ಬಾರಿಯ ರಣಜಿ ಟ್ರೋಫಿ ಋತುವಿನಲ್ಲಿ ಪಾಂಡಿಚೇರಿ ಪರ ಏಳು ಪಂದ್ಯಗಳಲ್ಲಿ 41 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎನಿಸಿದ್ದರು.