ಕ್ರೀಡೆ

ಸ್ಯಾಮ್ಸನ್ ಶತಕ, ಹಿನ್ನಡೆ ಭೀತಿಯಲ್ಲಿ ಬಿ: ಅಭಿಮನ್ಯು ಈಶ್ವರನ್ ಏಕಾಂಗಿ ಹೋರಾಟ

ಅನಂತಪುರ: ವೇಗಿ ನವದೀಪ್ ಸೈನಿ (74ಕ್ಕೆ 5) ಬಿಗಿ ಬೌಲಿಂಗ್ ಹಾಗೂ ನಾಯಕ ಅಭಿಮನ್ಯು ಈಶ್ವರನ್ (116 ರನ್, 170 ಎಸೆತ, 13 ಬೌಂಡರಿ, 1 ಸಿಕ್ಸರ್) ಶತಕದ ಹೋರಾಟದ ನಡುವೆಯೂ ಭಾರತ ಬಿ ತಂಡ ದುಲೀಪ್ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಭಾರತ ಡಿ ಎದುರು ಇನಿಂಗ್ಸ್ ಹಿನ್ನಡೆಯ ಭೀತಿ ಎದುರಿಸಿದೆ.

ಆರ್‌ಡಿಟಿಎಸ್ ಬಿ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ 5 ವಿಕೆಟ್‌ಗೆ 306 ರನ್‌ಗಳಿಂದ ದಿನದ ಆಟ ಆರಂಭಿಸಿದ ಭಾರತ ಡಿ, ಸಂಜು ಸ್ಯಾಮ್ಸನ್ (106 ರನ್, 101 ಎಸೆತ, 12 ಬೌಂಡರಿ, 3 ಸಿಕ್ಸರ್) ಶತಕದ ಹೊರತಾಗಿಯೂ ದಿಢೀರ್ ಕುಸಿತ ಕಂಡು 87.3 ಓವರ್‌ಗಳಲ್ಲಿ 349 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಬಿ ತಂಡಕ್ಕೆ ಅಗ್ರ ಕ್ರಮಾಂಕ ಬ್ಯಾಟರ್‌ಗಳು ಕೈಕೊಟ್ಟರು. ಎನ್. ಜಗದೀಶನ್ (13), ಸುಯಶ್ ಪ್ರಭುದೇಸಾಯಿ (16), ಮುಶೀರ್ ಖಾನ್ (5), ಸೂರ್ಯಕುಮಾರ್ (5) ಹಾಗೂ ನಿತೀಶ್ ಕುಮಾರ್ (0) ನಿರಾಸೆ ಮೂಡಿಸಿದರು.

ಆಗ ಜತೆಯಾದ ಅಭಿಮನ್ಯು ಹಾಗೂ ವಾಷಿಂಗ್ಟನ್ ಸುಂದರ್ (39*) ಜೋಡಿ ನಡೆಸಿದ ದಿಟ್ಟ ಜತೆಯಾಟದ ನೆರವಿನಿಂದ ದಿನದಂತ್ಯಕ್ಕೆ 56 ಓವರ್‌ಗಳಲ್ಲಿ 6 ವಿಕೆಟ್‌ಗೆ 210 ರನ್‌ಗಳಿಸಿದ್ದು, ಇನ್ನೂ 139 ರನ್‌ಗಳ ಹಿನ್ನಡೆಯಲ್ಲಿದೆ. ವಾಷಿಂಗ್ಟನ್ ಸುಂದರ್ ಜತೆಯಾಗಿ ರಾಹುಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಹಾಲಿ ಟೂರ್ನಿಯಲ್ಲಿ ಅಭಿಮನ್ಯು ಈಶ್ವರನ್‌ಗೆ ಇದು ಸತತ 2ನೇ ಶತಕ ಎನಿಸಿದೆ.

ಭಾರತ ಡಿ: 87.3 ಓವರ್‌ಗಳಲ್ಲಿ 349 (ಸ್ಯಾಮ್ಸನ್ 106, ಸಾರಾಂಶ್ 26, ಸೌರಭ್ 13, ಅರ್ಷದೀಪ್ 11*, ನವದೀಪ್ 74ಕ್ಕೆ 5, ರಾಹುಲ್ ಚಹರ್ 60ಕ್ಕೆ 3). ಭಾರತ ಬಿ: 58 ಓವರ್‌ಗಳಲ್ಲಿ 6 ವಿಕೆಟ್‌ಗೆ 210 (ಅಭಿಮನ್ಯು 116, ಎನ್.ಜಗದೀಶನ್ 13, ಸುಯಶ್ 16, ಮುಶೀರ್ 5, ಸೂರ್ಯ 5, ವಾಷಿಂಗ್ಟನ್ 39*, ಅರ್ಷದೀಪ್ ಸಿಂಗ್ 35ಕ್ಕೆ 3).

11: ಸಂಜು ಸ್ಯಾಮ್ಸನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಿಡಿಸಿದ 11ನೇ ಶತಕ ಇದಾಗಿದೆ.