ಕ್ರೀಡೆ

ಕ್ರೀಡೆ ನಿಂತರೂ, ತರಬೇತಿ ಮುಂದುವರಿಕೆ! ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್​ಬಾಲ್​ನಲ್ಲೂ ಆನ್​ಲೈನ್ ಪಾಠ

ಬೆಂಗಳೂರು: ಕೋವಿಡ್-19 ಮಹಾಮಾರಿ ಜಗತ್ತಿನ ಮೂಲೆಮೂಲೆಯಲ್ಲೂ ಭೀತಿ ಸೃಷ್ಟಿಸಿದೆ. ಅರಸನಿಂದ ಹಿಡಿದು ಆಳಿನವರೆಗೂ ಇದರ ಕಾಟ ತಪ್ಪಿದ್ದಲ್ಲ. ಕಳೆದ ಎರಡು ತಿಂಗಳ ಕರೊನಾ ವೈರಸ್ ಭೀತಿಯಿಂದಾಗಿ, ಬೇಸಗೆಯಲ್ಲಿ ನಡೆಯಬೇಕಿದ್ದ ಕ್ರೀಡಾ ಚಟುವಟಿಕೆಗಳೇ ಸಂಪೂರ್ಣ ಸ್ತಬ್ಧಗೊಂಡಿವೆ. ಕೆಲ ವೃತ್ತಿಪರ ಕ್ರೀಡಾಪಟುಗಳು ಮನೆಯಲ್ಲೇ ಕುಳಿತು ಫಿಟ್ನೆಸ್​ಗೆ ಗಮನ ಕೊಡುತ್ತಿದ್ದರೆ, ಮತ್ತೆ ಕೆಲವರು ಆನ್​ಲೈನ್ ಮೂಲಕ ತರಬೇತುದಾರರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಇಂಥ ಆಪತ್ತಿನ ಸಮಯದಲ್ಲಿ ಆನ್​ಲೈನ್ ಎಂಬುದೇ ಕ್ರೀಡಾಪಟುಗಳ ಪಾಲಿಗೆ ಆಶಾಕಿರಣವಾಗಿದೆ. ಚೆಸ್, ಶೂಟಿಂಗ್ ಕ್ರೀಡೆಗಳ ಬಳಿಕ ಈಗ ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್​ಬಾಲ್, ಗಾಲ್ಪ್​ಗಳಲ್ಲೂ ಮನೆಯಲ್ಲೇ ಇದ್ದು, ಆನ್​ಲೈನ್ ಮೂಲಕ ತರಬೇತಿ ಪಡೆಯಲಾಗುತ್ತಿದೆ.

ಫುಟ್​ಬಾಲ್: ಅಖಿಲ ಭಾರತ ಫುಟ್​ಬಾಲ್ ಫೆಡರೇಷನ್ ಈಗಾಗಲೇ ತನ್ನ 3 ಹಾಗೂ 4ನೇ ಗ್ರೇಡ್​ನ 200 ರೆಫ್ರಿಗಳಿಗೆ ಆನ್​ಲೈನ್ ಮೂಲಕ ತರಬೇತಿ ನೀಡುತ್ತಿದೆ. ಪ್ರತಿದಿನ ಮೂರು ಬಾರಿ ತಲಾ 2 ಗಂಟೆಗಳ ಕಾಲ ತರಬೇತಿ ನೀಡಲಾಗುತ್ತಿದೆ. ಫಿಟ್ನೆಸ್, ತಾಂತ್ರಿಕತೆ ದೃಷ್ಟಿಯಿಂದ ರೆಫ್ರಿಗಳಿಗೆ ಅನುಕೂಲವಾಗುತ್ತದೆ ಎಂದು ಎಐಎಫ್​ಎಫ್ ರೆಫ್ರಿಗಳ ನಿರ್ದೇಶಕ ಜೆ.ರವಿಶಂಕರ್ ತಿಳಿಸಿದ್ದಾರೆ.

ಚೆಸ್: ಆನ್​ಲೈನ್ ಮೂಲಕ ಹೆಚ್ಚು ಜನಪ್ರಿಯಗೊಂಡಿರುವ ಕ್ರೀಡೆ ಎಂದರೆ ಚೆಸ್. ಲಾಕ್​ಡೌನ್ ಸಮಸ್ಯೆಯಲ್ಲೂ ಸಾಕಷ್ಟು ಜನರನ್ನು ಆಕರ್ಷಿಸಿದೆ. ಇದಕ್ಕೆ ಆನ್​ಲೈನ್ ಅನುಕೂಲ. ಸ್ಥಳೀಯ ಮಟ್ಟದಿಂದ ಹಿಡಿತು ಅಂತಾರಾಷ್ಟ್ರೀಯ ಮಟ್ಟದವರೆಗೂ ಆನ್​ಲೈನ್ ಚೆಸ್ ತರಬೇತಿ, ಟೂರ್ನಿಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ.

ಗಾಲ್ಪ್: ಅತಿ ವಿಶಾಲವಾದ ಮೈದಾನದಲ್ಲಿ ನಡೆಯುವ ಕ್ರೀಡೆ ಗಾಲ್ಪ್​ಗೂ ಆನ್​ಲೈನ್ ಟಚ್ ಸಿಕ್ಕಿದೆ. ಕೋಚ್ ಇಂದ್ರಜಿತ್ ಭಲೊಟಿಯಾ ಹೇಳುವಂತೆ, ಸಿಎಫ್​ಎಲ್ ಲೈವ್ ತರಗತಿಗಳ ಮೂಲಕ ದೇಶದ ಯಾವುದೇ ಮೂಲೆಯಲ್ಲಿರುವ ಅಗ್ರ ಆಟಗಾರರನ್ನು ಸಂಕರ್ಪಸಿ ತರಬೇತಿ ನೀಡಲಾಗುತ್ತಿದೆ. ಪ್ರತಿ ಅವಧಿಗೂ ಚರ್ಚಾಕೂಟಗಳು ನಡೆಯುತ್ತಿವೆ.

ಬ್ಯಾಡ್ಮಿಂಟನ್: ಕಳೆದ ಹಲವು ವರ್ಷಗಳಿಂದ ಸಾಕಷ್ಟು ಜನಪ್ರಿಯಗೊಂಡಿರುವ ಕ್ರೀಡೆ ಬ್ಯಾಡ್ಮಿಂಟನ್. ಪ್ರತಿ ಪಾಲಕರು ತಮ್ಮ ಮಕ್ಕಳು ಪಿವಿ ಸಿಂಧು, ಸೈನಾ ನೆಹ್ವಾಲ್ ಆಗಬೇಕು ಎಂದು ಕನಸು ಕಾಣುತ್ತಿರುವ ಕಾಲ ಇದು. ಎಲ್ಲ ಅಕಾಡೆಮಿಗಳು ಲಾಕ್ ಆಗಿರುವುದರಿಂದ ಆಟಗಾರರನ್ನು ಮಾನಸಿಕವಾಗಿ ಸದೃಢಗೊಳಿಸುವ ದೃಷ್ಟಿಯಿಂದ ಆನ್​ಲೈನ್ ಮೂಲಕ ತರಗತಿ ತಗೆದುಕೊಳ್ಳಲಾಗುತ್ತಿದೆ. ಸ್ಕೈಪ್ ಮೂಲಕ ಫಿಟ್ನೆಸ್, ಸ್ಟ್ರೆಂಟ್, ಕಂಡೀಷನಿಂಗ್, ಯೋಗ ತರಗತಿ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಹೆಸರಾಂತ ಕೋಚ್ ವಿಮಲ್ ಕುಮಾರ್.

ಧೋನಿ, ಅಶ್ವಿನ್ ಆನ್​ಲೈನ್ ಕಮಾಲ್: ಟೀಮ್ ಇಂಡಿಯಾ, ಐಪಿಎಲ್​ನ ಸಿಎಸ್​ಕೆ ತಂಡದಲ್ಲಿ ಕಮಾಲ್ ಮಾಡಿದ ಜೋಡಿ ಮಾಜಿ ಎಂಎಸ್ ಧೋನಿ ಹಾಗೂ ಸ್ಪಿನ್ನರ್ ಆರ್.ಅಶ್ವಿನ್. ಬಹುತೇಕ ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ ಈ ಜೋಡಿ ಈಗಾಗಲೇ ಮುಂದಿನ ಗುರಿ ಅಕಾಡೆಮಿ, ಕೋಚಿಂಗ್ ವೃತ್ತಿ ಎಂದು ನಿರ್ಧರಿಸಿದಂತಿದೆ. ಇದೀಗ ಲಾಕ್​ಡೌನ್ ಹಿನ್ನೆಲೆಯಲ್ಲಿ ಆನ್​ಲೈನ್ ಮೂಲಕ ತಮ್ಮ ಕ್ರಿಕೆಟ್ ಅಕಾಡೆಮಿಗಳಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಶ್ವಿನ್ ಐಪಿಎಲ್ ಹಾಗೂ ಟೆಸ್ಟ್ ತಂಡಕ್ಕೆ ಸೀಮಿತವಾಗಿದ್ದರೆ, ಧೋನಿ ಈಗಾಗಲೇ ಟೆಸ್ಟ್​ಗೆ ನಿವೃತ್ತಿ ಹೇಳಿದ್ದು, ಸೀಮಿತ ಓವರ್​ಗಳಿಂದಲೂ ದೂರವೇ ಉಳಿದಿದ್ದಾರೆ.

ಎಂಎಸ್ ಧೋನಿ ನೇರವಾಗಿ ಆನ್​ಲೈನ್ ಕೋಚಿಂಗ್ ನೀಡದಿದ್ದರೂ ಅಕಾಡೆಮಿಯಲ್ಲಿರುವ ಕೋಚ್​ಗಳಿಗೆ ಅಗತ್ಯ ಮಾಹಿತಿ ರವಾನಿಸುತ್ತಿದ್ದಾರೆ. ಕ್ರಿಕೆಟಿಗರಿಗೆ ಅಭ್ಯಾಸ ನೀಡುವುದಕ್ಕೂ ಮೊದಲು ಧೋನಿ, ತರಬೇತುದಾರರನ್ನು ಸನ್ನದ್ಧಗೊಳಿಸಿದ್ದಾರೆ. ಬೇಸಿಗೆ ಶಿಬಿರ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಆನ್​ಲೈನ್ ಅಸ್ತ್ರವಾಗಿದೆ. ಧೋನಿ ಕ್ರಿಕೆಟ್ ಅಕಾಡೆಮಿ ಮುಖ್ಯಕೋಚ್ ಹಾಗೂ ಮಾಜಿ ಕ್ರಿಕೆಟಿಗ ಸತ್ರಜಿತ್ ಲಾಹಿರಿ ಪ್ರಕಾರ, ಪ್ರತಿ ವಿಡಿಯೋವನ್ನು 10 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸುತ್ತಾರೆ.

ಕ್ರಿಕೆಟರ್ ಹೆಸರಿನಲ್ಲಿ ಸ್ವತಃ ಆಪ್ ಹೊಂದಿದ್ದು, ತರಬೇತಿಗೆ ಆಗಮಿಸುವ ಆಟಗಾರರಿಗೆ ನೀಡಲಾಗುತ್ತಿದೆ. ಆಪ್​ನಲ್ಲಿ ಪ್ರತಿದಿನ ಬ್ಯಾಟಿಂಗ್, ಬೌಲಿಂಗ್ ಶೈಲಿಯ ವಿಡಿಯೋ ಅಪ್​ಲೋಡ್ ಮಾಡಲಾಗುವುದು. ಬಳಿಕ ಆಟಗಾರರಿಂದ ಪ್ರತಿಕ್ರಿಯೆ ಪಡೆಯಲಾಗುವುದು ಎಂದಿದ್ದಾರೆ. ಚೆನ್ನೈನಲ್ಲಿ 5 ಹಾಗೂ ಶಾರ್ಜಾದಲ್ಲಿ ಒಂದು ಅಕಾಡೆಮಿ ಹೊಂದಿರುವ ಅಶ್ವಿನ್ ಆನ್​ಲೈನ್ ತರಬೇತಿ ಕೈಗೆತ್ತಿಕೊಂಡಿದ್ದಾರೆ. ತಮಿಳುನಾಡಿನ ಮಾಜಿ ಆಟಗಾರ ವಿದ್ಯುತ್ ಶಿವರಾಮಕೃಷ್ಣನ್ ಆನ್​ಲೈನ್ ಕೂಡ ಚೆನ್ನೈನಲ್ಲಿ ಈಗಾಗಲೇ ತರಬೇತಿ ಆರಂಭಿಸಿದ್ದಾರೆ. ಇತ್ತೀಚಿನ ಹುಡುಗರಲ್ಲಿ ಆನ್​ಲೈನ್ ಕುರಿತು ಸಾಕಷ್ಟು ತಿಳುವಳಿಕೆ ಇರುವುದರಿಂದ ಹೇಳಿಕೊಡಲು ಕಷ್ಟವಾಗುವುದಿಲ್ಲ.