ಕ್ರೀಡೆ

ಆರ್​ಸಿಬಿ ವಿರುದ್ಧ ಡೆಲ್ಲಿ ತಂಡದ ಸೋಲಿಗೆ ಕಾರಣ ವಿವರಿಸಿದ ಹಂಗಾಮಿ ನಾಯಕ ಅಕ್ಷರ್​ ಪಟೇಲ್​

ಬೆಂಗಳೂರು: ಆರ್​ಸಿಬಿ ತಂಡದ ಆರಂಭಿಕರಿಬ್ಬರನ್ನು 4ನೇ ಓವರ್​ನೊಳಗೆ ಡಗೌಟ್​ಗೆ ಅಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ರಜತ್​ ಪಾಟೀದಾರ್​&ವಿಲ್​ ಜಾಕ್ಸ್​ ಜೋಡಿಯನ್ನೂ ಬೇಗನೆ ಔಟ್​ ಮಾಡಿ ಸಂಪೂರ್ಣ ಮೇಲುಗೈ ಸಾಧಿಸುವ ಅವಕಾಶವಿತ್ತು. ಆದರೆ ಫೀಲ್ಡರ್​ಗಳು 4-5 ಕ್ಯಾಚ್​ಗಳನ್ನು ಕೈಚೆಲ್ಲಿದ್ದರಿಂದ ಪಾಟೀದಾರ್​-ಜಾಕ್ಸ್​ ನಡುವೆ 88 ರನ್​ಗಳ ಅಮೂಲ್ಯ ಜತೆಯಾಟ ಏರ್ಪಟ್ಟಿತು. ಅಂತಿಮವಾಗಿ ಆರ್​ಸಿಬಿ ತಂಡದ 47 ರನ್​ ಗೆಲುವಿನಲ್ಲಿ ಈ ಜತೆಯಾಟವೇ ನಿರ್ಣಾಯಕ ಪಾತ್ರ ವಹಿಸಿತು. ಡೆಲ್ಲಿ ತಂಡದ ಹಂಗಾಮಿ ನಾಯಕ ಅಕ್ಷರ್​ ಪಟೇಲ್​ ಕೂಡ ಸೋಲಿನ ಬಳಿಕ ಇದೇ ಕಾರಣವನ್ನು ನೀಡಿದರು.

"ಕ್ಯಾಚ್​ಗಳನ್ನು ಕೈಚೆಲ್ಲಿದ್ದು ನಮಗೆ ಹಿನ್ನಡೆ ತಂದಿತು. ಇಲ್ಲದಿದ್ದರೆ ನಾವು 150 ರನ್​ಗಳಿಗೆ ಆರ್​ಸಿಬಿ ತಂಡವನ್ನು ನಿಯಂತ್ರಿಸಬಹುದಾಗಿತ್ತು. ಪವರ್​ಪ್ಲೇನಲ್ಲೇ 4 ವಿಕೆಟ್​ ಕಳೆದುಕೊಂಡಿದ್ದು ಕೂಡ ಚೇಸಿಂಗ್​ಗೆ ದೊಡ್ಡ ಹೊಡೆತ ನೀಡಿತು. ಈ ಪಿಚ್​ನಲ್ಲಿ 160&170 ರನ್​ ಕೂಡ ಸ್ಪರ್ಧಾತ್ಮಕವೆನಿಸುತ್ತಿತ್ತು' ಎಂದು ಅಕ್ಷರ್​ ಪಟೇಲ್​ ಸೋಲಿನ ಬಳಿಕ ಬೇಸರಿಸಿದರು.

ಆರ್​ಸಿಬಿ ತಂಡದ 187 ರನ್​ ಸವಾಲಿಗೆ ಪ್ರತಿಯಾಗಿ ಡೆಲ್ಲಿ ತಂಡ ಯಶ್​ ದಯಾಳ್​ (20ಕ್ಕೆ 3), ಗ್ಯುರ್ಸನ್​ (23ಕ್ಕೆ 2) ದಾಳಿಗೆ ಕುಸಿದು 19.1 ಓವರ್​ಗಳಲ್ಲಿ 140 ರನ್​ಗಳಿಗೆ ಸರ್ವಪತನ ಕಂಡಿತು. ಮೊದಲ 4 ಓವರ್​ಗಳಲ್ಲೇ 4 ವಿಕೆಟ್​ ಕಳೆದುಕೊಂಡ ಡೆಲ್ಲಿ ನಂತರ ಅಕ್ಷರ್​ ಪಟೇಲ್​ (57) ಹೋರಾಟದಿಂದ ಸೋಲಿನ ಅಂತರ ತಗ್ಗಿಸಿಕೊಂಡಿತು. ಜೇಕ್​ ಫ್ರೇಸರ್​ ಮೆಕ್​ಗುರ್ಕ್​ (21) ಮತ್ತು ಟ್ರಿಸ್ಟಾನ್​ ಸ್ಟಬ್ಸ್​ (3) ರನೌಟ್​ ಬಲೆಗೆ ಬಿದ್ದಿದ್ದು ಡೆಲ್ಲಿಗೆ ದೊಡ್ಡ ಹೊಡೆತ ನೀಡಿತು. ಆಲ್ರೌಂಡ್​ ನಿರ್ವಹಣೆ ತೋರಿದ ಕ್ಯಾಮರಾನ್​ ಗ್ರೀನ್​ (32 ರನ್​, 1 ವಿಕೆಟ್​, 1 ರನೌಟ್​) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆರ್​ಸಿಬಿ ತಂಡ ಐಪಿಎಲ್​ನಲ್ಲಿ 4ನೇ ಬಾರಿ ಸತತ 5 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯ ಜಯಿಸಿತು. 2009, 2016ರಲ್ಲೂ ಸತತ 5 ಪಂದ್ಯ ಗೆದ್ದಿದ್ದರೆ, 2011ರಲ್ಲಿ ಸತತ 7 ಪಂದ್ಯ ಜಯಿಸಿದ್ದು ಗರಿಷ್ಠವಾಗಿದೆ.

ಶ್ರೇಷ್ಠ ನಿರ್ವಹಣೆ ತೋರಿದೆವು. ಆರಂಭಿಕ 5-6 ಪಂದ್ಯಗಳಲ್ಲಿ ನಮ್ಮ ಬೌಲಿಂಗ್​ ಕೆಟ್ಟದಾಗಿತ್ತು. ಇದೀಗ ನಾವು ನಿರಂತರವಾಗಿ ವಿಕೆಟ್​ ಕಬಳಿಸುತ್ತಿದ್ದೇವೆ ಮತ್ತು 3 ಬಾರಿ ಎದುರಾಳಿ ತಂಡವನ್ನು ಆಲೌಟ್​ ಮಾಡಿದ್ದೇವೆ ಎಂದು ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿದರು.