ಕ್ರೀಡೆ

ವೇಗಿ ಮೊಹಮದ್ ಶಮಿ ಪುನರಾಗಮನ ಮಾಹಿತಿ ನೀಡಿದ ಟೀಮ್ ಇಂಡಿಯಾ ನಾಯಕ ರೋಹಿತ್

ಬೆಂಗಳೂರು: ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಮೊಹಮದ್ ಶಮಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಈಗಲೆ ಪರಿಗಣಿಸುವುದು ಕಠಿಣ ನಿರ್ಧಾರವಾಗಿದೆ ಎಂದು ರೋಹಿತ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

ಕಿವೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮುನ್ನಾದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹಾಲಿ ಟೆಸ್ಟ್ ಸರಣಿ ಅಥವಾ ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಶಮಿ ಶೇ.100 ಫಿಟ್ ಆಗಬೇಕು ಎಂಬುದು ತಂಡದ ಬಯಕೆಯಾಗಿತ್ತು. ಆದರೆ ಇತ್ತೀಚೆಗೆ ಅವರು ಮೊಣಕಾಲಿನ ಊತದಿಂದ ಬಳಲುತ್ತಿದ್ದು, ಇದು ಶಮಿ ಅವರ ಪುನರಾಗಮನಕ್ಕೂ ಅಡ್ಡಿಯಾಗಿದೆ. ಪಾದದ ಶಸ ಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದ ಶಮಿ ಬೌಲಿಂಗ್ ಅಭ್ಯಾಸವನ್ನೂ ಆರಂಭಿಸಿದ್ದರು. ಆಗ ಮೊಣಕಾಲಿನಲ್ಲಿ ಊತ ಕಂಡುಬಂದಿದೆ.

ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ವೈದ್ಯರ ನಿಗಾದಲ್ಲಿದ್ದು, ಫಿಟ್ನೆಸ್‌ಗಾಗಿ ಶ್ರಮಿಸಲಿದ್ದಾರೆ. ಜತೆಗೆ ಅಭ್ಯಾಸ ಪಂದ್ಯಗಳಲ್ಲೂ ಆಡುವ ಸಾಧ್ಯತೆಗಳಿವೆ. ಅವರಿಗೆ ಚೇತರಿಸಿಕೊಳ್ಳಲು ಮತ್ತು ಶೇ.100ರಷ್ಟು ಫಿಟ್ ಆಗಲು ಸಾಕಷ್ಟು ಸಮಯವನ್ನು ನೀಡಲು ನಿರ್ಧರಿಸಲಾಗಿದೆ. ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿರುವ ವೇಗಿ ಕಂಬ್ಯಾಕ್‌ನಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡುವುದು ಕಠಿಣವಾಗಿದೆ ಎಂದರು.

2023ರ ಏಕದಿನ ವಿಶ್ವಕಪ್ ಬಳಿಕ ಪಾದದ ಗಾಯದ ಶಸಚಿಕಿತ್ಸೆಗೆ ಒಳಗಾಗಿದ್ದ ಶಮಿ, ಪುನಶ್ಚೇತನ ಶಿಬಿರದಲ್ಲಿ ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ 4-6 ವಾರ ಸಮಯ ಹಿಡಿಯಲಿದೆ ಎಂಬ ವರದಿಯನ್ನು ತಳ್ಳಿಹಾಕಿದ್ದರು.