ಕ್ರೀಡೆ

ಒಲಿಂಪಿಕ್ಸ್ ಪಂದ್ಯಕ್ಕಾಗಿ ಬೇಕಿದ್ದರೆ ಮಾತ್ರ ನಿವೃತ್ತಿ ಹಿಂಪಡೆಯುವೆ!: ವದಂತಿಗಳಿಗೆ ತೆರೆ ಎಳೆದ ವಿರಾಟ್ ಕೊಹ್ಲಿ

ಬೆಂಗಳೂರು: ‘ನಾನು ಇನ್ನೂ ಕ್ರಿಕೆಟ್ ಆಡುವುದನ್ನು ಪ್ರೀತಿಸುತ್ತಿದ್ದು, ಸದ್ಯದ ಮಟ್ಟಿಗೆ ಎಲ್ಲವೂ ಸರಿಯಾಗಿದೆ. ಸದ್ಯಕ್ಕೆ ನಾನು ಯಾವುದೇ ಘೋಷಣೆ ಮಾಡುತ್ತಿಲ್ಲ. ಆದ್ದರಿಂದ ಯಾರು ಆತಂಕ ಪಡುವ ಅಗತ್ಯವಿಲ್ಲ’ಎಂಬ ಹೇಳಿಕೆಯೊಂದಿಗೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿವೃತ್ತಿ ವದಂತಿಗಳಿಗೆ ತೆರೆ ಎಳೆದರು.

ಆರ್‌ಸಿಬಿ ಫ್ರಾಂಚೈಸಿಯ ಇನ್ನೋವೇಶನ್ ಸ್ಪೋರ್ಟ್ಸ್ ಲ್ಯಾಬ್ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಕೊಹ್ಲಿ, ಯಾವುದೇ ದಾಖಲೆ ನಿರ್ಮಿಸಲು ಎದುರು ನೋಡುತ್ತಿಲ್ಲ. ಆದರೆ ಸ್ಪರ್ಧಾತ್ಮಕತೆಯಲ್ಲಿ ಆಟದ ಬಗೆಗಿನ ಪರಿಶುದ್ಧವಾದ ಪ್ರೀತಿಯಿಂದ ನಾನು ಎಲ್ಲಿಯವರೆಗೂ ಆಡಲು ಸಾಧ್ಯವೂ ಅಲ್ಲಿಯವರೆಗೂ ಆಟವಾಡುವುದನ್ನು ಮುಂದುವರಿಸುತ್ತೇನೆ. ಪ್ರಸ್ತುತ ಆಟದ ಸ್ಪರ್ಧಾತ್ಮಕತೆಯೂ, ಆಟಗಾರ ಆಟದಿಂದ ನಿವೃತ್ತಿ ಹೊಂದುವ ಯೋಚನೆಯನ್ನು ದೂರ ಮಾಡುತ್ತದೆ ಎಂದರು.

ನಿವೃತ್ತಿ ಪ್ರಶ್ನೆಗೆ ಆಟದಲ್ಲಿನ ಸ್ಪರ್ಧೆ ಉತ್ತರ ಒದಗಿಸುವುದಿಲ್ಲ. ಆದರೆ ಈ ಬಗ್ಗೆ ಮಾಜಿ ಕೋಚ್ ರಾಹುಲ್ ದ್ರಾವಿಡ್ ಜತೆ ಚರ್ಚೆಸಿದಾಗ, ’ನಾವು ಯಾವಾಗಲೂ ನಮ್ಮ ಜತೆ ಉತ್ತಮ ಭಾಂದವ್ಯ ಹೊಂದಿರಬೇಕು’ಎಂಬ ಸಲಹೆ ನೀಡಿದ್ದರು ಎಂದು ಕೊಹ್ಲಿ ನೆನಪು ಮಾಡಿಕೊಂಡರು.

ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಲ್ಲಿ ಐಪಿಎಲ್ ಪಾತ್ರವಿದೆ ಎಂದ ಕೊಹ್ಲಿ

ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್ ಸೇರ್ಪಡೆಗೊಂಡಿರುವುದು ರೋಮಾಂಚನ ತಂದಿದೆ. ಜಾಗತಿಕ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆಯಲ್ಲಿ ಐಪಿಎಲ್ ಯಶಸ್ಸು ಕೂಡ ಮಹತ್ವದ ಪಾತ್ರ ವಹಿಸಿದೆ. ಒಲಿಂಪಿಕ್ಸ್ ಚಾಂಪಿಯನ್ ಆಗುವುದು ಅಮೋಘ ಅನುಭವ.

ಕ್ರಿಕೆಟಿಗರಿಗೂ ಈಗ ಒಲಿಂಪಿಕ್ಸ್ ಚಾಂಪಿಯನ್‌ಗಳಾಗುವ ಅವಕಾಶ ಲಭಿಸಿದೆ ಎಂದು ಕೊಹ್ಲಿ ಹೇಳಿದರು. 2028ರ ವೇಳೆಗೆ ಕೊಹ್ಲಿ 40ರ ಆಸುಪಾಸು ತಲುಪಲಿದ್ದಾರೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಆಡುವ ಸಲುವಾಗಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಸಾಧ್ಯತೆಯನ್ನು ತಳ್ಳಿಹಾಕಿದರು. ಆದರೆ ಒಲಿಂಪಿಕ್ಸ್ ಪಂದ್ಯಕ್ಕಾಗಿ ಮಾತ್ರ ಬೇಕಿದ್ದರೆ ನಿವೃತ್ತಿ ಹಿಂಪಡೆಯುವೆ ಎಂದು ತಮಾಷೆ ಮಾಡಿದರು.