ಬೆಂಗಳೂರು: ರಣಜಿ ಟ್ರೋಫಿ ಮೊದಲ ಹಂತದ ಮುಕ್ತಾಯದ ಬಳಿಕ ದೇಶೀಯ ಸೀಮಿತ ಓವರ್ ಕ್ರಿಕೆಟ್ ಹಣಾಹಣಿಗೆ ವೇದಿಕೆ ಸಜ್ಜಾಗಿದ್ದು, ಶನಿವಾರದಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ದೇಶದ 5 ನಗರಗಳಲ್ಲಿ ಟೂರ್ನಿಯ ಲೀಗ್ ಪಂದ್ಯಗಳು ನಡೆಯಲಿವೆ. ಭಾನುವಾರ&ಸೋಮವಾರ ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಟೂರ್ನಿಯ ಮೊದಲ ದಿನದ ಪಂದ್ಯಗಳು ಆಯ್ಕೆ ಟ್ರಯಲ್ಸ್ನಂತೆ ಇರಲಿದ್ದು, ಫ್ರಾಂಚೈಸಿಗಳ ಗಮನಸೆಳೆಯಲು ಯುವ ಆಟಗಾರರಿಗೆ ಉತ್ತಮ ವೇದಿಕೆ ಒದಗಿಸಲಿವೆ. ಎರಡು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಇಂದೋರ್ನಲ್ಲಿ ಉತ್ತರಾಖಂಡ ವಿರುದ್ಧ ಮೊದಲ ಪಂದ್ಯ ಆಡಲಿದೆ. ಪಂಜಾಬ್ ಟೂರ್ನಿಯ ಹಾಲಿ ಚಾಂಪಿಯನ್ ತಂಡವಾಗಿದೆ.
ಸ್ಟಾರ್ಗಳು ಕಣಕ್ಕೆ
ಐಪಿಎಲ್ ಮೆಗಾ ಹರಾಜಿಗೆ ಮುನ್ನಾದಿನ ಶುರುವಾಗುತ್ತಿರುವ ಟೂರ್ನಿಯಲ್ಲಿ ಕೆಲ ಸ್ಟಾರ್ ಕ್ರಿಕೆಟಿಗರೂ ಭಾಗವಹಿಸುತ್ತಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬರೋಡ ಪರ ಕಣಕ್ಕಿಳಿಯಲಿದ್ದು, ಅವರ ಅಣ್ಣ ಕೃನಾಲ್ ಪಾಂಡ್ಯ ನಾಯಕತ್ವ ವಹಿಸಲಿದ್ದಾರೆ. ಬಂಗಾಳ ಪರ ವೇಗಿ ಮೊಹಮದ್ ಶಮಿ ಆಡಲಿದ್ದರೆ, ಶ್ರೇಯಸ್ ಅಯ್ಯರ್ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಅಜಿಂಕ್ಯ ರಹಾನೆ, ಪೃಥ್ವಿ ಷಾ, ಶಾರ್ದೂಲ್ ಠಾಕೂರ್ ಕುಡ ತಂಡದಲ್ಲಿದ್ದಾರೆ.
ಗುಂಪುಗಳು:
ಎ: ಪಂಜಾಬ್, ಬಂಗಾಳ, ಹೈದರಾಬಾದ್, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಮಿಜೋರಾಂ, ಮೇಘಾಲಯ. (ಸ್ಥಳ: ರಾಜ್ಕೋಟ್)
ಬಿ: ಬರೋಡ, ಗುಜರಾತ್, ಸೌರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರಾಖಂಡ, ತ್ರಿಪುರ, ಸಿಕ್ಕಿಂ. (ಸ್ಥಳ: ಇಂದೋರ್)
ಸಿ: ದೆಹಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಹರಿಯಾಣ, ಜಮ್ಮು&ಕಾಶ್ಮೀರ, ಮಣಿಪುರ, ಅರುಣಾಚಲ ಪ್ರದೇಶ. (ಸ್ಥಳ: ಮುಂಬೈ)
ಡಿ: ಅಸ್ಸಾಂ, ವಿದರ್ಭ, ರೈಲ್ವೇಸ್, ಒಡಿಶಾ, ಚಂಡೀಗಢ, ಛತ್ತೀಸ್ಗಢ, ಪುದುಚೇರಿ. (ಸ್ಥಳ: ವಿಜಯನಗರಂ)
ಇ: ಕೇರಳ, ಮುಂಬೈ, ಗೋವಾ, ಸರ್ವೀಸಸ್, ಮಹಾರಾಷ್ಟ್ರ, ಆಂಧ್ರ, ನಾಗಾಲ್ಯಾಂಡ್. (ಸ್ಥಳ: ಹೈದರಾಬಾದ್).
ಟೂರ್ನಿ ಸ್ವರೂಪ
38 ತಂಡಗಳನ್ನು 5 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಎ,ಬಿ,ಸಿ ಗುಂಪುಗಳಲ್ಲಿ ತಲಾ 8 ತಂಡಗಳಿದ್ದರೆ, ಡಿ, ಇ ಗುಂಪುಗಳಲ್ಲಿ ತಲಾ 7 ತಂಡಗಳಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್ ಹಂತಕ್ಕೇರಲಿವೆ. ಈ ಪೈಕಿ ಪ್ರತಿ ಗುಂಪಿನ ಅಗ್ರ 5 ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ಗೇರಲಿವೆ. 2ನೇ ಸ್ಥಾನ ಪಡೆದ 5 ತಂಡಗಳಿಗೆ ಅಂಕ/ಜಯ/ರನ್ರೇಟ್ ಆಧಾರದಲ್ಲಿ 6-10 ಶ್ರೇಯಾಂಕ ನೀಡಲಾಗುತ್ತದೆ. ಈ ಪೈಕಿ 6ನೇ ರ್ಯಾಂಕ್ ತಂಡ ನೇರವಾಗಿ ಕ್ವಾರ್ಟರ್ಫೈನಲ್ಗೇರಿದರೆ, ಉಳಿದ 4 ತಂಡಗಳು ಪ್ರಿ ಕ್ವಾರ್ಟರ್ಫೈನಲ್ನಲ್ಲಿ ಆಡಲಿವೆ.
*ಇಂಪ್ಯಾಕ್ಟ್ ಪ್ಲೇಯರ್ ಇಲ್ಲ
ಐಪಿಎಲ್ನಲ್ಲಿ 2027ರವರೆಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಉಳಿಸಿಕೊಂಡಿರುವ ನಡುವೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಈ ಬಾರಿ ಇದನ್ನು ಕೈಬಿಡಲಾಗಿದೆ. 2023ರಲ್ಲಿ ಐಪಿಎಲ್ಗೂ ಮುನ್ನ ಈ ಟೂರ್ನಿಯಲ್ಲೇ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ದೇಶೀಯ ಕ್ರಿಕೆಟ್ನಲ್ಲಿ ಆಲ್ರೌಂಡರ್ಗಳ ಬೆಳವಣಿಗೆಗೆ ಈ ನಿಯಮ ಮಾರಕವಾಗಿದೆ ಎಂಬ ಕಾರಣಕ್ಕಾಗಿ ಇದನ್ನು ರದ್ದುಗೊಳಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಓವರ್ಗೆ 2 ನೋಬಾಲ್ ಎಸೆಯಲು ಅವಕಾಶ ಕಲ್ಪಿಸುವ ನಿಯಮ ಮುಂದುವರಿಯಲಿದೆ.
ಶುಭಾರಂಭದ ತವಕದಲ್ಲಿ ಕರ್ನಾಟಕ
ಕಳೆದ ಆವೃತ್ತಿಯಲ್ಲಿ ಕನಿಷ್ಠ ನಾಕೌಟ್ ಹಂತಕ್ಕೇರಲು ಸಾಧ್ಯವಾಗದೆ ನಿರಾಸೆ ಅನುಭವಿಸಿದ್ದ ಕರ್ನಾಟಕ ತಂಡ ಹಾಲಿ ಆವೃತ್ತಿಯಲ್ಲಿ ಶುಭಾರಂಭ ಕಾಣುವ ತವಕದಲ್ಲಿದೆ. ಮಯಾಂಕ್ ಅಗರ್ವಾಲ್ ಬಳಗ ಶನಿವಾರ, ಉತ್ತರಾಖಂಡ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ರಣಜಿಯಲ್ಲಿ ಆಡಿದ ಮೊದಲ 5 ಲೀಗ್ ಪಂದ್ಯಗಳಲ್ಲಿ ಸಾಧಾರಣ ನಿರ್ವಹಣೆ ತೋರಿರುವ ಕರ್ನಾಟಕ ತಂಡ ಟಿ20 ಟೂರ್ನಿಯಲ್ಲಿ ಚೇತೋಹಾರಿ ನಿರ್ವಹಣೆ ತೋರಿಸಬೇಕಾಗಿದೆ. ಜತೆಗೆ ಆರಂಭಿಕ ಪಂದ್ಯ ರಾಜ್ಯದ ಕೆಲ ಅನುಭವಿ&ಯುವ ಆಟಗಾರರಿಗೆ ಐಪಿಎಲ್ ಹರಾಜಿಗೆ ಮುನ್ನ ಫ್ರಾಂಚೈಸಿಗಳ ಗಮನಸೆಳೆಯುವ ಅವಕಾಶ ಕಲ್ಪಿಸಿದೆ.
ಬಿ ಗುಂಪಿನಲ್ಲಿರುವ ಕರ್ನಾಟಕ ತಂಡಕ್ಕೆ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ಮತ್ತು ಬರೋಡ ತಂಡಗಳು ಪ್ರಮುಖ ಸವಾಲೆನಿಸಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳಷ್ಟೇ ನಾಕೌಟ್ಗೇರುವುದರಿಂದ ರಾಜ್ಯ ತಂಡ ಇವೆರಡು ಮಾಜಿ ಚಾಂಪಿಯನ್ ತಂಡಗಳ ಪೈಕಿ ಕನಿಷ್ಠ ಒಂದನ್ನಾದರೂ ಸೋಲಿಸುವ ಅಗತ್ಯವಿದೆ. ಕಳೆದ ಮಹಾರಾಜ ಟ್ರೋಫಿಯಲ್ಲಿ 50 ಸಿಕ್ಸರ್ ಸಹಿತ 507 ರನ್ ಸಿಡಿಸಿದ ಅಭಿನವ್ ಮನೋಹರ್ ಭರ್ಜರಿ ಫಾರ್ಮ್ ರಾಜ್ಯಕ್ಕೆ ವರದಾನವೆನಿಸಿದೆ. ಜತೆಗೆ ಅನುಭವಿ ಆಟಗಾರರು ಜವಾಬ್ದಾರಿ ಅರಿತು ಆಡಬೇಕಿದೆ ಮತ್ತು ಯುವ ಆಟಗಾರರು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಮನೀಷ್ ಪಾಂಡೆ (ಉಪನಾಯಕ), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಸ್ಮರಣ್ ಆರ್, ಕೆಎಲ್ ಶ್ರೀಜಿತ್ (ವಿ.ಕೀ), ವೈಶಾಕ್ ವಿ, ಮ್ಯಾಕ್ನೀಲ್ ನೋರೋನ್ಹಾ, ಕೌಶಿಕ್ ವಿ, ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಚೇತನ್ಎಲ್ಆರ್ (ವಿ.ಕೀ), ಶುಭಾಂಗ್ ಹೆಗ್ಡೆ, ಮನ್ವಂತ್ ಕುಮಾರ್ ಎಲ್, ಅನೀಶ್ ಕೆವಿ, ಪ್ರವಿಣ್ ದುಬೆ.
ಕರ್ನಾಟಕದ ಪಂದ್ಯಗಳು
ದಿನಾಂಕ ಎದುರಾಳಿ ಆರಂಭ
ನ.23 ಉತ್ತರಾಖಂಡ ಮ.1.30
ನ.25 ತ್ರಿಪುರ ಬೆಳಗ್ಗೆ 9
ನ.27 ಸೌರಾಷ್ಟ್ರ ಬೆಳಗ್ಗೆ 11
ನ.29 ಸಿಕ್ಕಿಂ ಸಂಜೆ 4.30
ಡಿ.1 ತಮಿಳುನಾಡು ಬೆಳಗ್ಗೆ 9
ಡಿ.3 ಬರೋಡ ಮ.1.30
ಡಿ.5 ಗುಜರಾತ್ ಬೆಳಗ್ಗೆ 11